ನವದೆಹಲಿ: ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೇರ್ ಮೇಲಿನ FIR ರದ್ದುಗೊಳಿಸಲು ಅಹಲಾಬಾದ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೆ ಟ್ವಿಟರ್ ನಲ್ಲಿ #IStandWithZubair ಹ್ಯಾಸ್ ಟ್ಯಾಗ್ ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ.
ಮುಹಮ್ಮದ್ ಝುಬೇರ್ ನಿಜವಾದ ಪತ್ರಕರ್ತ, ದೇಶಭಕ್ತ ಎಂದು ನೆಟ್ಟಿಗರು ಟ್ವಿಟರ್ ನಲ್ಲಿ ಬನ್ನಿಸಿದ್ದಾರೆ.
ಝುಬೇರ್ ತನ್ನ ಟ್ವೀಟ್ ನಲ್ಲಿ ಯತಿ ನರಸಿಂಗಾನಂದ ಸರಸ್ವತಿ, ಭಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಎಂಬ 3 ಹಿಂದೂ ಧರ್ಮೀಯರನ್ನು ‘ದ್ವೇಷ ಪ್ರಚೋದಕರು’ ಎಂದು ಕರೆದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಜೂನ್ 1 ರಂದು ಝುಬೇರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ‘ತಮ್ಮ ಟ್ವೀಟ್ ನಲ್ಲಿ ಒಂದು ವರ್ಗದ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿಲ್ಲ ಅಥವಾ ಅವಮಾನಿಸುವ ಪ್ರಯತ್ನ ಮಾಡಿಲ್ಲ. ದುಷ್ಟ ಉದ್ದೇಶದಿಂದ ಕಿರುಕುಳ ನೀಡುವುದಕ್ಕಾಗಿಯೇ ನನ್ನ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕೆಂದು’ ಝುಬೇರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಹಾಗೆ ಮಾಡಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರ ಪೀಠವು ಜುಬೇರ್ ಮನವಿಯನ್ನು ವಜಾಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಝುಬೇರ್ ಬೆಂಬಲಿಸಿ ಟ್ವೀಟ್ ಗಳು ಹರಿದಾಡುತ್ತಿವೆ. ಇದುವರೆಗೂ #IStandWithZubair ಹ್ಯಾಸ್ ಟ್ಯಾಗ್ ಹೊಂದಿರುವ ಒಂದೂವರೆ ಲಕ್ಷಕ್ಕೂ ಅಧಿಕ ಟ್ವೀಟ್ ಗಳು ದಾಖಲಾಗಿವೆ.