ರಾಜ್ಯದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಸಂಖ್ಯೆ ಹೆಚ್ಚಳ | ಕ್ಯಾಂಪಸ್ ಫ್ರಂಟ್‌ನಿಂದ ‘ಝೀರೋ ಡ್ರಾಪ್ ಔಟ್’ ಅಭಿಯಾನ

Prasthutha|

- Advertisement -

ರಾಜ್ಯದಲ್ಲಿ ವಿಧ್ಯಾರ್ಥಿಗಳ ಡ್ರಾಪ್ ಔಟ್ ಸಂಖ್ಯೆ ಹೆಚ್ಚಳದಿಂದಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ‘ಝೀರೋ ಡ್ರಾಪ್ ಔಟ್’ ಅಭಿಯಾನವನ್ನು ಹಮ್ಮಿಕೊಂಡಿದೆ.

ಕೊರೋನ ಲಾಕ್‌ಡೌನ್ ನಂತರ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಗಮನಹರಿಸಿದಾಗ ಹಲವಾರು ಸಮಸ್ಯೆಗಳು ಗೋಚರಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಲಾಕ್‌ಡೌನ್ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವ ಉತ್ಸಾಹ ತೋರುತ್ತಿಲ್ಲ. ರಾಜ್ಯದಲ್ಲಿ ನಡೆದ ಕೆಲವು ಅಧ್ಯಯನಗಳ ಪ್ರಕಾರ ಮನೆಯ ಆರ್ಥಿಕ ಪರಿಸ್ಥಿತಿ , ಬಾಲ ಕಾರ್ಮಿಕತೆ, ಶಿಕ್ಷಣದ ಬಗ್ಗೆ ವಿದ್ಯಾರ್ಥಿ- ಪೊಷಕರಿಗೆ ಕಾಳಜಿಯ ಕೊರತೆ , ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ,ನಿರಾಸಕ್ತಿ ಮುಂತಾದ ಹಲವಾರು ಕಾರಣಗಳಿಂದ ಕಳೆದ ಕೊರೋನಾ  ಲಾಕ್-ಡೌನ್ ನಂತರ ರಾಜ್ಯದಲ್ಲೇ ಸುಮಾರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ಮರು ದಾಖಲಾತಿಗಳನ್ನು ಪಡೆದಿರುವುದಿಲ್ಲ ಎಂಬ ಆಘಾತಕಾರಿ ವರದಿಯನ್ನು ನಮಗೆ ಕಾಣಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಗೈರು ಹಾಜರಾತಿ ಕೂಡ ಗಣನೀಯ ಪ್ರಮಾಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರದಿಯಾಗುತ್ತಿದೆ.

- Advertisement -

ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳ ಪೈಕಿ ಸುಮಾರು 25 ಸಾವಿರ ಮಂದಿ ಮುಂದಿನ ವಿದ್ಯಾಭ್ಯಾಸ ನಡೆಸುತ್ತಿಲ್ಲ. ಅದೇ ರೀತಿ ಪ್ರಥಮ ಪಿಯುಸಿ ಯಿಂದ ದ್ವಿತೀಯ ಪಿಯುಸಿಗೆ ತೇರ್ಗಡೆ ಆದವರ ಪೈಕಿ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಇನ್ನೂ ಕೂಡ ದಾಖಲಾಗಿಲ್ಲ. ಅದೇ ರೀತಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕೂಡ ಗೈರುಹಾಜರಾಗುತ್ತಿರುವ ಸಂಖ್ಯೆ ಬಹಳ ಹೆಚ್ಚಿದೆ.

ಶಾಲಾ ಕಾಲೇಜು ಅರ್ಧದಲ್ಲಿ ಮೊಟಕುಗೊಳಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬದಲಾಗಿ ಕುಟುಂಬ ನಿರ್ವಹಣೆ ಮಾಡಲು ಬೇಸಾಯ ,ಕೂಲಿ, ಕಾರ್ಖಾನೆಗಳಿಗೆ ದುಡಿಮೆಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಗಳು ಬರುತ್ತಿದೆ.

ಇದರ ಗಂಭೀರತೆಯನ್ನು ಮನಗಂಡು ಸಮಾಜದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ‘ಉತ್ತಮ ಭವಿಷ್ಯಕ್ಕಾಗಿ ಕಾರ್ಯಪ್ರವೃತ್ತರಾಗೋಣ’ಎಂಬ ಘೋಷಾ ವಾಕ್ಯದೊಂದಿಗೆ “ಝೀರೋ ಡ್ರಾಪ್ ಔಟ್” ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ, ವಿದ್ಯಾರ್ಥಿಗಳ ಸಮಾಲೋಚನೆ, ಜಾಗೃತಿ ಕಾರ್ಯಕ್ರಮ, ಪೋಷಕರ ಸಭೆ,  ಹೆಲ್ಪ್ ಡೆಸ್ಕ್ ಮುಂತಾದ ಕಾರ್ಯಕ್ರಮಗಳು ನಡೆಯಲಿಕ್ಕಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

   ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಪೋಷಕರು, ಅಧಿಕಾರಿಗಳು ಅಭಿಯಾನದಲ್ಲಿ ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಲು ಕ್ಯಾಂಪಸ್ ಫ್ರಂಟ್ ಕೇಳಿಕೊಂಡಿದೆ.



Join Whatsapp