ಜಮೀರ್ ಅಹ್ಮದ್ ಹೆಗಲಿಗೆ ಬಂದೂಕು ಇರಿಸಿ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ: ಶ್ರೀನಾಥ್ ಪೂಜಾರಿ

Prasthutha|

ಸಿಂದಗಿ : ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವ ಬಿಜೆಪಿ, ಕಾಂಗ್ರೆಸ್ ನ ಷಡ್ಯಂತ್ರಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ, ಜಮೀರ್ ಅಹ್ಮದ್ ಖಾನ್ ಹೆಗಲಿಗೆ ಬಂದೂಕು ಇರಿಸಿ ಸಿಂದಗಿ ಭಾಗದಲ್ಲಿ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಹೆಣೆಯಲಾಗಿದೆ, ಜಮೀರ್ ಅಹ್ಮದ್ ಈ ಹುನ್ನಾರದ ಪಾಲುದಾರರಾಗಬಾರದು ಎಂದು ಯುವ ಧುರೀಣ ಹಾಗೂ ನ್ಯಾಯವಾದಿ ಶ್ರೀನಾಥ ಪೂಜಾರಿ ಹೇಳಿದ್ದಾರೆ.

- Advertisement -


ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನೇ ಸೋಲಿಸಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಕಾಂಗ್ರೆಸ್ ದಾಳವಾಗಿ ಬಳಸಿಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುವ ಜಮೀರ್ ಅಹ್ಮದ್ ಅವರು, ಅಲ್ಪಸಂಖ್ಯಾತರಿಗಾಗಿ ಶಾಸಕ ಜಮೀರ್ ಅಹ್ಮದ್ ಮಾಡಿರುವ ಕೊಡುಗೆ ಏನು ಎಂಬುದು ಮೊದಲು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.


ಜಮೀರ್ ಅಹ್ಮದ್ ಸಮಾಜಕ್ಕೆ ಎಷ್ಟು ನಾಲಾಯಕ್ ಕೆಲಸ ಮಾಡಿದ್ದಿರಿ ಎನ್ನುವುದು ನಾವು ಬಹಿರಂಗ ಪಡಿಸುತ್ತೇವೆ, ಆರ್ ಎಸ್ ಎಸ್ ಬಗ್ಗೆ ನಿನಗೆ ಇಷ್ಟೊಂದು ತಿಳಿದಿದ್ದರೆ ಕಾಂಗ್ರೆಸ್ ಈಗಿನ ಅಭ್ಯರ್ಥಿ ಅಶೋಕ ಮನಗೂಳಿ ಅವರು ಆರ್ ಎಸ್ ಎಸ್ ಕಾರ್ಯಕರ್ತರು ಎಂದು ನಿನಗೆ ತಿಳಿದಿರಲಿಲ್ಲವೇ?, ಕಾಂಗ್ರೆಸ್ ನ ಆರ್ ಎಸ್ ಎಸ್ ಅಭ್ಯರ್ಥಿಗಾಗಿ ಅಲ್ಪಸಂಖ್ಯಾತರ ಮತ ಕೆಳಲು ನಿನಗೆ ಯಾವ ನೈತಿಕತೆ ಇದೆ ಎಂದು ಶ್ರೀನಾಥ್ ಪೂಜಾರಿ ಪ್ರಶ್ನಿಸಿದರು.

- Advertisement -


ಜಮೀರ್ ಅಹ್ಮದ್ ಒಬ್ಬ ಹಾಸ್ಯ ಕಲಾವಿದರ ಹಾಗೆ ಹಾವಭಾವ ಮಾಡುತ್ತಾ ಸಿಂಧಗಿ ಮತಕ್ಷೇತ್ರದ ಜನರನ್ನು ಜೋಕರ್ ತರಹ ರಂಜಿಸುತ್ತಿದ್ದಾರೆ. ಪ್ರಬುದ್ಧತೆ ಇಲ್ಲದ ಚಿಕ್ಕ ಮಕ್ಕಳ ತರಹ ವರ್ತಿಸುತ್ತಿರುವುದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಜಿಯಾ ಅಂಗಡಿ ಅವರನ್ನು ಬೆಂಬಲಿಸುತ್ತಿದ್ದೇವೆ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಪ್ರತೀಕವಾಗಿಯೇ ನಾಜಿಯಾ ಅಂಗಡಿ ಕಣಕ್ಕಿಳಿದಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಿಂದ ಹಿಂದುಳಿದ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಬೇಕಾಗಿದೆ, ಹೀಗಾಗಿ ಎಲ್ಲ ಸಮುದಾಯಗಳ ಪ್ರತೀಕವಾಗಿ ನಾಜಿಯಾ ಅಂಗಡಿ ಚುನಾವಣಾ ಕಣದಲ್ಲಿದ್ದಾರೆ ಎಂದರು.


ಆದರೆ ಜಮೀರ್ಅಹ್ಮದ್ ಹಾಗೂ ಇತರ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರು ತನ್ನದೇ ಸಮುದಾಯದ ಸಹೋದರಿಯನ್ನು ಸೋಲಿಸಲು ಹಗಲಿರುಳು ಶ್ರಮಿಸುತ್ತಿರುವುದು ನೋಡಿದರೆ ಜಮೀರ್ ಅಹ್ಮದ್ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದಂತೆ ತೋರುತ್ತದೆ, ಅಲ್ಪಸಂಖ್ಯಾತ ಸಮುದಾಯವನ್ನು ರಾಜಕೀಯವಾಗಿ ದಮನ ಮಾಡುವ ಷಡ್ಯಂತ್ರಕ್ಕೆ ಜಮೀರ್ಅಹ್ಮದ್ ಸಹ ಪಾಲುದಾರರಾಗಬಾರದು ಎಂದು ಪೂಜಾರಿ ಹೇಳಿದರು.ಈ ಸಂದರ್ಭದಲ್ಲಿ ಹಾಲು ಮತ ಸಮುದಾಯ ನಾಯಕರಾದ ಪ್ರಕಾಶ ಹಿರೆಕುರುಬರ ಉಪಸ್ಥಿತರಿದ್ದರು.



Join Whatsapp