ಜಬೀವುಲ್ಲಾರನ್ನು ಮನೆಯಿಂದ ಕರೆದೊಯ್ದ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿ ಕಾಲಿಗೆ ಗುಂಡು ಹಾರಿಸಿದ್ದಾರೆ: ಪತ್ನಿ ಶಬನಾ ಆರೋಪ

Prasthutha|

►ಶಿವಮೊಗ್ಗ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಂತ್ರಸ್ತ ಕುಟುಂಬ ಆಗ್ರಹ

- Advertisement -

ಶಿವಮೊಗ್ಗ: ಸ್ವಾತಂತ್ರ್ಯದ ದಿನದಂದು ಪತಿ ಜಬೀವುಲ್ಲಾ ಅವರನ್ನು ಮನೆಯಿಂದಲೇ ಐದು ಮಂದಿ ಪೊಲೀಸರು ರಾತ್ರಿ 9.30ರ ವೇಳೆಗೆ ಕರೆದುಕೊಂಡು ಹೋಗಿ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿ 2.30ರ ಸುಮಾರಿಗೆ ಕಾಲಿಗೆ ಗುಂಡು ಹಾರಿಸಿದ್ದಾರೆ. ಇವೆಲ್ಲವೂ ವ್ಯವಸ್ಥಿತ ಷಡ್ಯಂತರದ ಭಾಗವಾಗಿದೆ. ಆದ್ದರಿಂದ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಜಬೀವುಲ್ಲಾ ಅವರ ಪತ್ನಿ ಶಬನಾ ಆಗ್ರಹಿಸಿದ್ದಾರೆ.


ಶಿವಮೊಗ್ಗದಲ್ಲಿ ಕರೆದಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನದಂದು ಪತಿ ಜಬೀವುಲ್ಲಾ ಮನೆಯಲ್ಲೇ ಇದ್ದರು. ಮಧ್ಯಾಹ್ನದ ನಮಾಝ್ ಗಾಗಿ ಮಸೀದಿಗೆ ಹೋಗಿ ಬರುವುದಾಗಿ ಹೋದವರು ನಮಾಝ್ ಮುಗಿಸಿ ಸ್ವಲ್ಪ ಹೊತ್ತಿನಲ್ಲೇ ಬಂದಿದ್ದಾರೆ. ಸರ್ಕಲ್ ಬಳಿ ಗಲಾಟೆಯಾಗುತ್ತಿದೆ ಎಂದು ಅವರು ನನ್ನೊಂದಿಗೆ ಹೇಳಿದರು. ಸಂಜೆಯವರೆಗೂ ಮನೆ ಸಮೀಪದಲ್ಲೇ ಇದ್ದರು. ರಾತ್ರಿ ಊಟ ಮುಗಿಸಿ ಕೈತೊಳೆಯಲು ಎದ್ದೇಳಬೇಕು ಎನ್ನುವಷ್ಟರಲ್ಲಿ ಐದು ಮಂದಿ ಪೊಲೀಸರು ಬಂದು ಜಬೀವುಲ್ಲಾ ಅವರನ್ನು ಠಾಣೆಗೆ ಬರುವಂತೆ ಸೂಚಿಸಿದರು. ಯಾವ ಕಾರಣಕ್ಕಾಗಿ ಎಂದು ನಾನು ಪ್ರಶ್ನಿಸಿದಾಗ, “ಇಲ್ಲಮ್ಮ 10 ನಿಮಿಷದಲ್ಲೇ ಕಳಿಹಿಸುತ್ತೇವೆ” ಎಂದು ಹೇಳಿ ಬೈಕ್ ನಲ್ಲಿ ಕೂರಿಸಿ ಕರೆದುಕೊಂಡು ಹೋದರು ಎಂದು ಅಂದಿನ ಘಟನೆಯನ್ನು ಅವರು ವಿವರಿಸಿದರು.
ಆದರೆ ರಾತ್ರಿ ಎಷ್ಟೇ ಹೊತ್ತಾದರೂ ಪತಿ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಅವರ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವುದು ಟಿವಿ ನೋಡಿ ತಿಳಿಯಿತು. ರಾತ್ರಿ 2.30ರ ವೇಳೆಗೆ ಜಬೀವುಲ್ಲಾ ಅವರನ್ನು ಬಂಧಿಸಿರುವುದಾಗಿ, ಅವರು ಪೊಲೀಸರಿಗೆ ಚಾಕು ಇರಿದು ತಪ್ಪಿಸಿಕೊಳ್ಳಲು ಯತ್ನಿಸಿರುವುದಾಗಿ ಪೊಲೀಸರು ಹೇಳುತ್ತಿದ್ದರು. ಇವೆಲ್ಲವೂ ಸುಳ್ಳು ಸುದ್ದಿ ಮತ್ತು ಕಟ್ಟು ಕಥೆಯಾಗಿದೆ. ಅವರು ತಪ್ಪಿಸಿಕೊಳ್ಳುವುದಿದ್ದರೆ ಪೊಲೀಸರು ಮನೆಗೆ ಬಂದಾಗಲೇ ತಪ್ಪಿಸಿಕೊಳ್ಳಬಹುದಿತ್ತು. ವ್ಯವಸ್ಥಿತವಾಗಿ ಸಂಚು ರೂಪಿಸಿ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದರು.

- Advertisement -


ಬಳಿಕ ಆಸ್ಪತ್ರೆಯವರು ಕರೆ ಮಾಡಿ ಪತಿಗೆ ಆಪರೇಷನ್ ಮಾಡಬೇಕಿರುವುದರಿಂದ ಸಮ್ಮತಿ ಪತ್ರಕ್ಕೆ ಸಹಿ ಹಾಕುವಂತೆ ಕೇಳಿದರು. ಅದರಂತೆ ಆಸ್ಪತ್ರೆಗೆ ಹೋದಾಗ ಪತಿಯೊಂದಿಗೆ ಮಾತನಾಡಿದೆ. ಆಗ ಅವರು “ನನ್ನ ಕಣ್ಣಿಗೆ ಬಟ್ಟೆ ಕಟ್ಟಿ, ಕಾಲಿಗೆ ಗುಂಡು ಹಾರಿಸಿದರು” ಎಂದು ನನ್ನೊಂದಿಗೆ ಹೇಳಿದರು. ನಂತರ ವೈದ್ಯರು ಒತ್ತಾಯ ಪಡಿಸಿದಾಗ, ಗಂಡನಿಗೆ ಏನಾದರೂ ಆದರೆ ನೀವು ಮತ್ತು ಪೊಲೀಸರೇ ಹೊಣೆ ಎಂದು ಹೇಳಿದೆ. ಅದಕ್ಕೆ ಅವರು ಸಮ್ಮತಿಸಿದಾಗ ಸಮ್ಮತಿ ಪತ್ರಕ್ಕೆ ಸಹಿ ಹಾಕಿದೆ ಎಂದು ಶಬನಾ ವಿವರಿಸಿದರು.


ಗುಂಡು ಹಾರಿಸಿದ್ದನ್ನು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಸಮರ್ಥಿಸಿಕೊಂಡು, ಇದು ಕೇವಲ ಸ್ಯಾಂಪಲ್ ಎಂದು ಹೇಳಿದ್ದಾರೆ. ಇದನ್ನು ನೋಡುವಾಗ ಇವೆಲ್ಲರೂ ವ್ಯವಸ್ಥಿತವಾಗಿ ನಡೆದ ಘಟನೆ ಎಂಬುದು ಸಾಬೀತಾಗುತ್ತದೆ ಎಂದು ಅವರು ಹೇಳಿದರು.
ಜಬೀವುಲ್ಲಾ ಅವರನ್ನು ಮನೆಯಿಂದಲೇ ಕರೆದುಕೊಂಡು ಹೋಗಿ ಕಾಲಿಗೆ ಶೂಟ್ ಮಾಡಿದ್ದಾರೆ. ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿ ನಮ್ಮಲ್ಲಿವೆ. ನ್ಯಾಯಾಲಯಕ್ಕೆ ಅವುಗಳನ್ನು ಸಲ್ಲಿಸುತ್ತೇವೆ. ಇಲ್ಲಿನ ಪೊಲೀಸರ ಮೇಲೆ ರಾಜಕೀಯ ಒತ್ತಡವಿದೆ. ಆದ್ದರಿಂದ ಪೊಲೀಸರ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.


ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಅಧ್ಯಕ್ಷ ರಿಯಾಝ್ ಅಹ್ಮದ್ ಮಾತನಾಡಿ, ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರೇ ಕಾರಣ. ಶಾಂತಿ ನೆಲೆಸಬೇಕಾದರೆ ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕು. ಇಲ್ಲಿ ಸಂಘಪರಿವಾರದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ ಮತ್ತೊಂದು ಸಮುದಾಯದ ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಕ್ರಮಕೈಗೊಂಡರೂ ಅಂತಹ ಅಧಿಕಾರಿಗಳನ್ನು ಅಮಾನತು, ವರ್ಗಾವಣೆ ಮಾಡಲಾಗುತ್ತಿದೆ. ಮಾಲ್ ನಲ್ಲಿ ಉದ್ದೇಶಪೂರ್ವಕವಾಗಿ ಸಾವರ್ಕರ್ ಫೋಟೋ ಹಾಕಿದ್ದೇ ಇವೆಲ್ಲ ಘಟನೆಗೆ ಮೂಲ ಕಾರಣ. ಆದ್ದರಿಂದ ಪಾಲಿಕೆ ಆಯುಕ್ತರ ವಿರುದ್ಧ ದೂರು ನೀಡಿದ್ದೇವೆ. ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.



Join Whatsapp