ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ, ಕರ್ನಾಟಕ ಯುವ ನೀತಿ- 2021 ರೂಪಿಸಲು ಮುಂದಾಗಿದ್ದು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಬಾಲಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆ ಸಮಿತಿಯನ್ನು ರಚಿಸಿದೆ.
ಈ ಸಮಿತಿಯಲ್ಲಿ ಹಿಂದುತ್ವ ಪ್ರತಿಪಾದಕ, ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್, ಮಾಜಿ ಸಚಿವ ಅನಂತಕುಮಾರ್ ಅವರ ಪುತ್ರಿ ಐಶ್ವರ್ಯ ದಿವೇಶ್, ಬೆಂಗಳೂರಿನ ಮಲ್ಲಿಕಾರ್ಜುನ್ ಬಿ.ಪಾಟೀಲ್, ವಿನೋದ್ ಕೃಷ್ಣಮೂರ್ತಿ, ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್.ನಟರಾಜ್, ರಾಜ್ಯ ಎನ್ಎಸ್ ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ದೊಡ್ಡಬಳ್ಳಾಪುರದ ಡಾ.ಡಿ.ಎಸ್.ಕೃಷ್ಣ, ಮಂಡ್ಯದ ಕೆ.ನಾಗಣ್ಣಗೌಡ, ಬೇಲೂರಿನ ಸಂತೋಷ್ ಸೋಮಶೇಖರ್ (ಕೆಂಚಾಂಬ) ಅವರು ಸದಸ್ಯರಾಗಿದ್ದಾರೆ.
ಸಮಿತಿಯ ವಿಶೇಷ ಆಹ್ವಾನಿತರಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಸದಸ್ಯ ಕಾರ್ಯದರ್ಶಿಯಗಿ ಇಲಾಖೆ ಆಯುಕ್ತರನ್ನು ನೇಮಿಸಲಾಗಿದೆ. ತಜ್ಞರ ಸಮಿತಿಗೆ ಸಂಘ ಪರಿವಾರದ ಹಿನ್ನೆಲೆಯವರನ್ನು ಸದಸ್ಯರನ್ನಾಗಿ ಸೇರಿಸಲಾಗಿದೆ.
“ಯುವಜನರು ತಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಲು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅನುವಾಗುವಂತೆ ಸಮಗ್ರ ಯುವ ನೀತಿ ಹೊರತರಲು ರಚನೆಯಾಗಿರುವ ತಜ್ಞರ ಸಮಿತಿ ಇದಾಗಿದ್ದು, ಸಮಗ್ರವಾಗಿ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿ ನೀಡಬೇಕು” ಎಂದು ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಉಮೇಶ್ ಶಾಸ್ತ್ರಿ ಆದೇಶ ಹೊರಡಿಸಿದ್ದಾರೆ.
ಸಮಿತಿಗೆ ನೇಮಕವಾಗಿರುವವರಲ್ಲಿ ಸಂಘಪರಿವಾರದ ಹಿನ್ನೆಲೆಯವರು ಹೆಚ್ಚಾಗಿ ಇರುವುದರಿಂದ ಯುವ ನೀತಿಯ ಸಂಬಂಧ ಆಕ್ಷೇಪಗಳು ವ್ಯಕ್ತವಾಗಿವೆ. ಚಕ್ರವರ್ತಿ ಸೂಲಿಬೆಲೆಯವರ ಸಾರ್ವಜನಿಕ ಭಾಷಣಗಳ ಕುರಿತು ಮೊದಲಿನಿಂದಲೂ ವ್ಯಂಗ್ಯ, ಕುಹಕಗಳಿವೆ. ಚಕ್ರವರ್ತಿ ಸೂಲಿಬೆಲೆಯವರು ಸುಳ್ಳುಗಳನ್ನು ಪೋಣಿಸಿ ಭಾಷಣ ಮಾಡುತ್ತಾರೆಂಬ ಆರೋಪಗಳಿದ್ದು, ಅಂಥವರನ್ನು ಸಮಿತಿಯಿಂದ ಕೈಬಿಡಬೇಕು ಎಂದು ಪ್ರಗತಿಪರರು ಆಗ್ರಹಿಸಿದ್ದಾರೆ.