ಆತೂರು | ಪೊಲೀಸ್ ಚೆಕ್ ಪಾಯಿಂಟ್ನಲ್ಲಿ ತಪಾಸಣೆ ವೇಳೆ ಟೆಂಪೋ ಡಿಕ್ಕಿ : ತಾಯಿಯೆದುರೇ ಬೈಕ್ ಸವಾರ ಸಾವು

Prasthutha|

ದ್ವಿ ಚಕ್ರ ವಾಹನ ಸವಾರರೊಬ್ಬರನ್ನು ತಡೆದು ನಿಲ್ಲಿಸಿದ ಪೊಲೀಸರು ಆತನ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ  ನಡೆದಿದೆ.

- Advertisement -

ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ದಾಖಲಾತಿ ತೆಗೆದುಕೊಂಡು ಪೊಲೀಸರಿಗೆ ತೋರಿಸುತ್ತಿದ್ದಾಗ ವೇಗವಾಗಿ ಬಂದ ಟಾಟಾ ಏಸ್ ಗೂಡ್ಸ್ ವಾಹನವು ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲಾ ಅಂಗಡಿ ಮುಗ್ಗಟ್ಟು ತೆರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದರೂ ಕಡಬ ಮತ್ತು ಉಪ್ಪಿನಂಗಡಿ ಪೊಲೀಸರು ಜನರಿಗೆ ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಪೊಲೀಸರು ಸಾರ್ವಜನಿಕರ ಜೀವ ಉಳಿಸುವ ಕೆಲಸ ಮಾಡಬೇಕೆ ವಿನಃ ಜೀವ ತೆಗೆಯುವ ಕೆಲಸ ಮಾಡಬಾರದು. ಈ  ಘಟನೆಗೆ ಪೊಲೀಸರೇ ಕಾರಣವಾಗಿರುತ್ತಾರೆ. ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ ಮದ್ಯಾಹ್ನ 1ರವರೆಗೆ ತಮ್ಮ ತಮ್ಮ ಅಗತ್ಯ ವಸ್ತುಗಳಿಗೆ ಹೋಗಲು ಜಿಲ್ಲಾಧಿಕಾರಿಯವರು ಸಮ್ಮತಿಸಿದ್ದಾರೆ. ಆದರೂ ಆತೂರಿನಲ್ಲಿ ಇವತ್ತು ತಪಾಸಣೆ ನಡೆದಿದ್ದು 12 ಗಂಟೆಗೆ. ಜಿಲ್ಲೆಯಲ್ಲಿ ಬೇರೆ ಎಲ್ಲೂ ಇಲ್ಲದ  ಕಠಿಣ ನಿರ್ಬಂಧ ಕಡಬ ತಾಲೂಕಿನಲ್ಲಿ ಮಾತ್ರವಿದೆ. ಪೊಲೀಸರ ನಡೆಯಿಂದ ಒಂದು ಜೀವ ಹೋಗುವಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಜಮಾಯಿಸಿ ಪೊಲೀಸರ ನಡೆಯನ್ನು ಖಂಡಿಸಿ, ಘೋಷಣೆ ಕೂಗಿದರು. ಪೊಲೀಸರ ನಿಷ್ಕರುಣ ವಾಹನ ತಪಾಸಣೆಯಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೋಲೀಸ್ ಚೆಕ್ ಪಾಯಿಂಟ್ ಧ್ವಂಸಗೊಳಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರತಿಭಟಿಸಿದ ಆಕ್ರೋಶಿತ ಸ್ಥಳೀಯರ ವಿರುದ್ಧವೇ ಪೊಲೀಸರು ಲಾಠಿ ಬೀಸಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.



Join Whatsapp