ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಮುಖ್ಯಮಂತ್ರಿ ಯಡಿಯೂರಪ್ಪ ಜನರಿಗೆ ದ್ರೋಹ ಮಾಡಿದ್ದಾರೆ : ರಕ್ಷಾ ರಾಮಯ್ಯ

Prasthutha|

ಬೆಂಗಳೂರು, ಮೇ 13 : ಕೋವಿಡ್ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗದೇ ವಿಫಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ಪ್ರದೇಶ ಯುವ ಕಾಂಗ್ರೆಸ್ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ವ್ಯಂಗ್ಯವಾಡಿದ್ದಾರೆ. ಕೋವಿಡ್ ಲಸಿಕೆ ವಿತರಣೆ, ಔಷಧಿ, ಸೋಂಕು ನಿಯಂತ್ರಣ ಸೇರಿ ಎಲ್ಲಾ ಹಂತಗಳಲ್ಲೂ ವಿಫಲ್ಯಗಳ ಸರಮಾಲೆಯನ್ನೇ ಸೃಷ್ಟಿಸಿರುವ ಹಿರಿಯ ರಾಜಕಾರಣಿ ಯಡಿಯೂರಪ್ಪ ಇಂದು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಪದತ್ಯಾಗ ಮಾಡಿ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೆ ಎಂಬ ವಿಶ್ವಾಸವಿತ್ತು. ಮುಖ್ಯಮಂತ್ರಿ ಮತ್ತು ಸರ್ಕಾರ ನೀಡಿರುವ ಮಾಹಿತಿಯಿಂದ ಜನ ಸಾಮಾನ್ಯರಲ್ಲಿ ಆತ್ಮವಿಶ‍್ವಾಸ ಮೂಡಿಲ್ಲ. ಅಂಕಿ ಅಂಶಗಳನ್ನು ನೀಡಿ ತೃಪ್ತಿಪಡಿಸಲು ಸಾಧ್ಯವಿಲ್ಲ. ಜನತೆ ಪ್ರಾಮಾಣಿಕ ಕೆಲಸಕ್ಕೆ ಮಾತ್ರ ಮನ್ನಣೆ ನೀಡುತ್ತಾರೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

 ಲಾಕ್ ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರು, ಶೋಷಿತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ತೊಂದರೆಯಲ್ಲಿರುವ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಜನರ ಜೀವನ ಮತ್ತು ಜೀವಕ್ಕೆ ಬೆಲೆ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ಸೋಂಕು ನಿಯಂತ್ರಣದಲ್ಲಿ ಕೇಂದ್ರದ ಲಸಿಕೆ ಅಭಿಯಾನ ನೆಲ ಕಚ್ಚಿದ್ದು, ಅದರಲ್ಲೂ ಪ್ರಮುಖವಾಗಿ 18 ರಿಂದ 44 ವಯೋಮಿತಿಯ ಜನ  ಭ್ರಮನಿರಸನಕ್ಕೆ ಒಳಗಾಗಿದೆ. ರಾಜ್ಯದ ಯಾವುದೇ ಭಾಗದಲ್ಲೂ ಕೋವ್ಯಾಕ್ಸಿನ್ ಲಸಿಕೆ ದೊರೆಯುತ್ತಿಲ್ಲ. ಕೋವಿಶೀಲ್ಡ್ ಇದ್ದರೂ ಅದು 2ನೇ ಡೋಸ್ ಗೆ ಮೀಸಲಿರಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅವೈಜ್ಞಾನಿಕ ತೀರ್ಮಾನಗಳಿಂದಾಗಿ ಯುವ ಸಮೂಹ ಲಸಿಕೆಯಿಂದ ವಂಚಿತವಾಗಿದ್ದು, ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಲು ಬಿಜೆಪಿ ಆಡಳಿತ ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.

- Advertisement -

ವಿಚಿತ್ರವೆಂದರೆ ಕೋವ್ಯಾಕ್ಸಿನ್ ಲಸಿಕೆಗೆ ಅಭಾವವಿದ್ದರೂ ಸಹ 2 ರಿಂದ 18 ವರ್ಷದ ಮಕ್ಕಳ ಗುಂಪಿನ ಮೇಲೆ 2 ಮತ್ತು 3 ನೇ ಹಂತದ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಗೆ  ಅನುಮತಿ ನೀಡಿರುವ, ಕೋವಿ ಶೀಲ್ಡ್ ಡೋಸ್ ಗಳ ನಡುವೆ 12 ರಿಂದ 16 ವಾರಗಳ ಅಂತರ ಕಾಯ್ದುಕೊಳ್ಳುವ ಗಡುವು ವಿಸ್ತರಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಕೂಡ ಸಾಕಷ್ಟು ಗೊಂದಲ, ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಂ.ಎಸ್. ರಕ್ಷಾ ರಾಮಯ್ಯ, ಕೋವಿಡ್ ಸೋಂಕಿಗೆ ಇತ್ತೀಚೆಗೆ ಯುವ ಸಮೂಹ ಹೆಚ್ಚಾಗಿ ಬಲಿಯಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಆತಂಕ ಸೃಷ್ಟಿಯಾಗಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನೀಡಿರುವ ಐದು ಅಂಶಗಳ ಸೂತ್ರಗಳು ನಿಷ್ಪ್ರಯೋಜಕವಾಗಿದೆ. ಮೊದಲ ಸೂತ್ರದಂತೆ ಸೋಂಕು ಪತ್ತೆ ಮಾಡುವುದನ್ನು ಕೈಬಿಡಲಾಗಿದೆ. ಸೋಂಕು ಪತ್ತೆ ಪರೀಕ್ಷೆಗಳನ್ನು ಗಣನೀಯವಾಗಿ ಇಳಿಕೆ ಮಾಡಿರುವುದೇ ಇದಕ್ಕೆ ನಿರ್ದರ್ಶನವಾಗಿದೆ.

ಇನ್ನು ಸೋಂಕು ಜಾಡು ಪತ್ತೆ ಮಾಡುವ ಎರಡನೇ ಸೂತ್ರವನ್ನು ಸಹ ಕೈಬಿಟ್ಟಿದ್ದು, ಇದರಿಂದ ಸೋಂಕು ಸಮುದಾಯದ ಹಂತಕ್ಕೆ ಹರಡಲು ಕಾರಣವಾಗಿದೆ. ಕೋವಿಡ್ ಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಉಭಯ ಸರ್ಕಾರಗಳು ಸೋತಿದೆ. ಆಮ್ಲಜನಕ, ಔಷಧಿ ಯಾವುದನ್ನೂ ಒದಗಿಸುತ್ತಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸೂಕ್ತ ವರ್ತನೆ ಎಂಬ ನಾಲ್ಕನೇ ಅಂಶ ನಗೆಪಾಟಿಲಿಗೆ ಈಡಾಗಿದ್ದು, ಕೋವಿಡ್ ವಿಚಾರದಲ್ಲಿ ಸರ್ಕಾರದ ತೀರ್ಮಾನಗಳು ಅಪಹಾಸ್ಯಕ್ಕೆ ತುತ್ತಾಗಿದೆ. ಹೀಗಿರುವಾಗ ಸೋಂಕು ನಿಯಂತ್ರಣ ಕ್ರಮ, ಶಿಷ್ಟಾಚಾರಗಳನ್ನು ಪಾಲಿಸಿ ಎಂದು ಜನ ಸಾಮಾನ್ಯರಿಗೆ ಸೂಚನೆ ನೀಡುವ ನೈತಿಕೆಯನ್ನೇ ಕಳೆದುಕೊಂಡಿದೆ. ಇನ್ನು ಕೊನೆಯದಾಗಿ ಲಸಿಕೆ ಅಭಿಯಾನದ ಐದನೇ ಸೂತ್ರ ಆರೋಗ್ಯ ವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿಸಿದೆ ಎಂದು ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

- Advertisement -