ಬೆಂಗಳೂರು : ಕೋವಿಡ್ ಸೋಂಕಿನ ಎರಡನೇ ಅಲೆ ನಡುವೆಯೂ ಕೊರೋನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಪೊಲೀಸರಿಗೆ ಗೌರವ ಸೂಚಿಸುವ “ ನಮ್ಮ ಪೊಲೀಸ್: ನಮ್ಮ ಹೆಮ್ಮೆ” ರಾಜ್ಯ ಮಟ್ಟದ ಅಭಿಯಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಇಂದು ಚಾಲನೆ ನೀಡಿದರು. ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿ.ವಿ. ಶ್ರೀನಿವಾಸ್ ಪೊಲೀಸರಿಗೆ ಕೋವಿಡ್ ನಿಂದ ರಕ್ಷಣೆ ಪಡೆಯುವ ಎಲ್ಲಾ ಪರಿಕರಗಳನ್ನು ಒಳಗೊಂಡ ಸಮಗ್ರ ಕಿಟ್ ವಿತರಣೆ ಮಾಡಿದರು.
ಸುರಕ್ಷತಾ ಕಿಟ್ ನಲ್ಲಿ ಮುಖ ಗವಸು, ಫೇಸ್ ಶೀಲ್ಡ್, ಕೈಗವಸು, -ಕರಶುಚಿಗೊಳಿಸುವ ಸ್ಯಾನಿಟೈರ್, ಸೋಂಕು ನಿವಾರಕ, ಆಕ್ಸಿ ಮೀಟರ್ ಮತ್ತು ದೇಹದ ತಾಪಮಾನ ಪರೀಕ್ಷಿಸುವ ಉಪಕರಣವನ್ನು ಒಳಗೊಂಡಿದೆ.ಬಳಿಕ ಮಾತನಾಡಿದ ಬಿ.ವಿ. ಶ್ರೀನಿವಾಸ್, ಕೋವಿಡ್ ಸಂದರ್ಭದಲ್ಲಿ ಜನರ ಸೇವೆ ಮಾಡುವುದು ನಮ್ಮ ಗುರಿಯಾಗಿದ್ದು, ರಾಷ್ಟ್ರೀಯ ಯುವ ಕಾಂಗ್ರೆಸ್ ದೇಶಾದ್ಯಂತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದೆ. ನಾವು ರಾಜಕೀಯ ಉದ್ದೇಶದಿಂದ ಇಂತಹ ಚಟುವಟಿಕೆ ನಡೆಸುತ್ತಿಲ್ಲ. ಯಾವುದೇ ಜಾತಿ, ಧರ್ಮ, ಸಮುದಾಯವನ್ನು ಗುರಿಮಾಡಿಕೊಂಡು ನಾವು ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ನ ಸಂಸ್ಕೃತಿ ಜನರ ಸೇವೆ ಮಾಡುವುದಾಗಿದೆ, ನಾವು ರಾಜಕೀಯವನ್ನು ಮೀರಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದರು.ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಸೇವಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಆದೇಶದಂತೆ ಪ್ರದೇಶ ಯುವ ಕಾಂಗ್ರೆಸ್ ತಂಡ ಅನ್ನ, ಔಷಧಿ, ಆಂಬ್ಯುಲೆನ್ಸ್ ಸೌಲಭ್ಯಗಳ ಜತೆಗೆ ಲಸಿಕೆಗೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಜನರ ಸೇವೆ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಪೊಲೀಸರು ಸೋಂಕು ನಿಯಂತ್ರಣ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದು, ಕನಿಷ್ಠ 16 ರಿಂದ 18 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರಿಗೆ ಗೌರವದ ಜತೆಗೆ ಧನ್ಯವಾದ ಹೇಳುವುದು ಈ ಅಭಿಯಾನದ ಉದ್ದೇಶವಾಗಿದೆ. ಕೊರೋನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಸೋಂಕಿನಿಂದ ಬಾಧಿತರಾದ ಎರಡನೇ ಅತಿ ದೊಡ್ಡ ವರ್ಗವಾಗಿದೆ ಎಂದರು.ಯುವ ಕಾಂಗ್ರೆಸ್ ನಿಂದ ಸಾಧ್ಯವಾದಷ್ಟು ಪ್ರಮಾಣದಲ್ಲಿ ನೆರವು ಒದಗಿಸಲಾಗುತ್ತಿದೆ. ಈ ವರೆಗೆ ಹಲವಾರು ಜನ ಸಮುದಾಯಗಳಿಗೆ ಸ್ಪಂದಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಜನರಿಗೆ ಸೇವೆ ಸಲ್ಲಿಸುವ ಗುರಿ ಹೋಂದಿದ್ದೇವೆ. ರಾಜ್ಯಾದ್ಯಂತ ಸೇವಾ ಚಟುವಟಿಕೆಗಳು ಮುಂದುವರೆಯಲಿವೆ ಎಂದರು.ಈ ಸಂದರ್ಭದಲ್ಲಿ ರಾಷ್ಟ್ರ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಸುರಬಿ ದ್ವಿವೇದಿ, ಪ್ರದೇಶ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಭವ್ಯ ಕೆ.ಆರ್. ಜೆ.ಬಿ.ಎಂ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆರೀಪ್ ಉಲ್ಲಾ ಕೆ.ಎಂ., ಅತೀಖ್ ಉಲ್ಲಾ, ಎಚ್.ಎಸ್. ಸಂದೀಪ್, ಪ್ರದೀಪ್, ಮನ್ನನ್, ವಿಜಯ್ ಆನಂದ್ ಮತ್ತು ಯುವ ಕಾಂಗ್ರೆಸ್ ಮುಖಂಡರಾದ ಮೊಹಮದ್ ನಲಪಾಡ್ ಮತ್ತಿತರರು ಉಪಸ್ಥಿತರಿದ್ದರು.