ಸುಳ್ಯದಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ

Prasthutha|

►ರಾಜಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಕರೆಸಿ ಕೃತ್ಯ

- Advertisement -

ಸುಳ್ಯ: ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸುಳ್ಯದ ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ನಡೆದಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡ ಮಸೂದ್ (19) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಮೆದುಳಿಗೆ ತೀವ್ರ ಹಾನಿ ಯಾಗಿರುವುದರಿಂದ ಮೆದುಳು ನಿಷ್ಕ್ರಿಯಗೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿರುವುದಾಗಿ ತಿಳಿದು ಬಂದಿದೆ.

- Advertisement -

ಕಳೆಂಜದ ನಿವಾಸಿಗಳಾದ ಮಸೂದ್ ಮತ್ತು ಸುಧೀರ್ ನಡುವೆ ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಅಂಗಡಿಯ ಬಳಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು ಸುದೀರ್ ನ ಹಣೆಯಲ್ಲಿ ಸ್ವಲ್ಪ ರಕ್ತ ಬಂದಿದೆ. ತಕ್ಷಣ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳಿಸಿದ್ದಾರೆ. ಇದಾದ ಬಳಿಕ ಸುಧೀರ್ ಮತ್ತು ಆತನ ಸ್ನೇಹಿತರು,  ಮಸೂದ್ ಗೆ ಕರೆಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದು ಕರೆಸಿ ಕೊಂಡಿದ್ದಾರೆ. ಇವರ ಮಾತು ನಂಬಿ ಮಸೂದ್ ಮತ್ತು ಆತನ ಸ್ನೇಹಿತ ಬೈಕ್ ನಲ್ಲಿ ತಂಡ ಕರೆದ ಸ್ಥಳಕ್ಕೆ ತೆರಳಿದ್ದಾರೆ. ತಕ್ಷಣ ಅಲ್ಲಿ ಅಡಗಿ ಕುಳಿತಿದ್ದ ಸುಧೀರ್ ಮತ್ತು ಆತನ ಸ್ನೇಹಿತರು ಏಕಾಏಕಿ ಮಸೂದ್ ಮೇಲೆ ದೊಣ್ಣೆ, ರಾಡ್ ,ಸೋಡಾ ಬಾಟಲಿಯಿಂದ ದಾಳಿ ನಡೆಸಿದ್ದಾರೆ.

ತೀವ್ರ ಗಾಯಗೊಂಡ ಮಸೂದ್ ಅಲ್ಲಿಂದ ಓಡಿಹೋಗಿದ್ದು, ವಿಷಯ ತಿಳಿದ ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ.

ಪೊಲೀಸರು ಕೂಡ ಪ್ರಕರಣವನ್ನು ಸೌಹಾರ್ದಯುತವಾಗಿ  ಇತ್ಯರ್ಥ ಪಡಿಸಲು ಹೇಳಿ ಅಲ್ಲಿಂದ ತೆರಳಿದ್ದಾರೆ. ನಂತರ ಎಲ್ಲರೂ ಮನೆ ಕಡೆ ತೆರಳಿದ್ದಾರೆ.

ಆದರೆ ತಲೆಗೆ ತೀವ್ರ ಹಲ್ಲೆಗೊಳಗಾಗಿ ಅಲ್ಲಿಂದ ತಪ್ಪಿಸಿಕೊಂಡ ಮಸೂದ್ ಸ್ವಲ್ಪ ದೂರ ಹೋಗಿ ಬಿದ್ದಿದ್ದಾರೆ. ಅವರನ್ನು ಎಲ್ಲಾ ಕಡೆ ಹುಡುಕಾಡಿದಾಗ ರಾತ್ರಿ 2.30 ರ ಸುಮಾರಿಗೆ ಮನೆಯೊಂದರ ಬಾವಿಯ ಬಳಿ ಪ್ರಜ್ಞಾಹೀನನಾಗಿ ಬಿದ್ದಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಕೂಡ ಆಗಿದೆ. ತಕ್ಷಣ ಆತನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಆತನನ್ನು ರಾತ್ರಿಯೇ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸೂದ್ ಮೇಲೆ ಹಲ್ಲೆ ನಡೆಸಿದ  ತಂಡದಲ್ಲಿ ಸುಧೀರ್, ರಂಜಿತ್, ಅಭಿ ಮತ್ತಿತರರು ಇದ್ದರು ಎಂದು ಮಸೂದ್ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಬೇಕಷ್ಟೆ.



Join Whatsapp