ತಿರುವನಂತಪುರಂ: ವಿವಾಹಿತ ಸ್ನೇಹಿತನೊಂದಿಗೆ ಹೋಟೆಲ್ ನಲ್ಲಿ ತಂಗಿದ್ದ ಯುವತಿಯೊಬ್ಬರು ಶನಿವಾರ ತಡರಾತ್ರಿ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಂಪನೂರಿನ ಹೋಟೆಲ್ ಒಂದರಲ್ಲಿ ನಡೆದಿದೆ.
ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ ಗಾಯತ್ರಿ (23) ನಿಗೂಢವಾಗಿ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದ್ದು, ಆಕೆಯ ಜೊತೆಗಿದ್ದ ಪರವೂರು ಮೂಲದ ಪ್ರವೀಣ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ ಇಬ್ಬರೂ ಹೋಟೆಲ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ಪ್ರವೀಣ್’ನಿಂದ ಕರೆ ಬಂದಿದ್ದು, ಮಧ್ಯರಾತ್ರಿಯ ವೇಳೆಗೆ ತನ್ನ ಗೆಳತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡು ಬಂದಿದೆ.
ಅಷ್ಟರಲ್ಲಿ ಆ ವ್ಯಕ್ತಿ ಹೋಟೆಲ್ ನಿಂದ ನಾಪತ್ತೆಯಾಗಿದ್ದಾರೆ. ಇವರಿಬ್ಬರು ನಗರದ ಆಭರಣ ಮಳಿಗೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ.