ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರಿಯಾ ಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ನಿಯೋಜನೆಗೊಂಡಿದ್ದಾರೆ.
2021ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವರು ಮೊದಲ ಅವಕಾಶದಲ್ಲೇ ಅಧ್ಯಕ್ಷೆಯಾಗಿದ್ದರು. 20 ತಿಂಗಳ ಬಳಿಕ ಎರಡನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರೆದಿದ್ದರು. ಆಗಸ್ಟ್ 1 ರಂದು ಕಾರವಾರ ಉಪವಿಭಾಗಾಧಿಕಾರಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ರಾಜೀನಾಮೆ ಸಲ್ಲಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಬದಲು ಮಕ್ಕಳಿಗೆ ಶಿಕ್ಷಣ ನೀಡುವುದು ಉತ್ತಮ ಸಮಾಜ ಸೇವೆ ಎಂಬುದನ್ನು ಅರಿತುಕೊಂಡೆ. ಅದಕ್ಕೆ ರಾಜೀನಾಮೆ ಸಲ್ಲಿಸಿ ಮತ್ತೆ ಶಿಕ್ಷಕಿ ಆಗಿದ್ದೇನೆ ಎಂದು ತಿಳಿಸಿದ್ದಾರೆ.