ದಾವಣಗೆರೆ: ಮದುವೆಗೆ ಬಟ್ಟೆ ಖರೀದಿಸಲು ಹೋದ ಇಬ್ಬರು ಸಹೋದರರ ಪೈಕಿ ಓರ್ವ ಕೊಲೆಯಾದ ಪ್ರಕರಣವನ್ನು ಭೇದಿಸಿರುವ ದಾವಣಗೆರೆ ಪೋಲಿಸರು, ನಾಪತ್ತೆಯಾದವನೇ ಕೊಲೆಗಾರ ಎಂಬುದನ್ನು ಪತ್ತೆಹಚ್ಚಿ ಆತನನ್ನು ಜೈಲಿನ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕೊಲೆಯಾಗಿದ್ದ ಅಲ್ತಾಫ್ ಅವರ ದೊಡ್ಡಮ್ಮನ ಮಗ ಇಬ್ರಾಹೀಮ್ ಬಂಧಿತ ಆರೋಪಿ.
ಇಬ್ರಾಹೀಮ್ ಗೆ ಮದುವೆ ನಿಶ್ಚಿಯವಾಗಿತ್ತು. ಆ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ಣು ಹಾಕಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಅಲ್ತಾಫ್ ನನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಇಬ್ರಾಹಿಮ್ ನ ಮದುವೆ ಮಾರ್ಚ್ ತಿಂಗಳಲ್ಲಿ ನಡೆಸುವುದೆಂದು ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಸಮಾರಂಭಕ್ಕೆ ಇಬ್ರಾಹಿಂ ಹಾಗೂ ಅಲ್ತಾಫ್ ಒಟ್ಟಾಗಿ ಬೈಕ್ ನಲ್ಲಿ ಜವಳಿ ಖರೀದಿಗೆಂದು ಇದೇ ತಿಂಗಳು ಮಂಗಳವಾರ 18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಇಬ್ಬರೂ ಮನೆಯವರೊಂದಿಗೆ ಫೋನ್ ಸಂಪರ್ಕದಲ್ಲಿದ್ದರು. ನಂತರ, ಇದ್ದಕ್ಕಿದ್ದಂತೆ ಒಂದು ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಇಬ್ಬರ ಪತ್ತೆ ಇರಲಿಲ್ಲ
ಬಳಿಕ ಮನೆಯವರು ಎಲ್ಲೆಡೆ ಹುಡುಕಾಡಿ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಡಿದಾಗ ನಿರ್ಜನ ಪ್ರದೇಶದಲ್ಲಿ ಕತ್ತು ಸೀಳಿ ಕೊಲೆಗೈದ ಸ್ಥಿತಿಯಲ್ಲಿ ಅಲ್ತಾಫ್ ನ ಮೃತದೇಹ ಪತ್ತೆಯಾಗಿತ್ತು. ಆದರೆ ಇಬ್ರಾಹೀಮ್ ನ ಸುಳಿವು ಇರಲಿಲ್ಲ.
ಪ್ರಕರಣವನ್ನು ಭೇದಿಸಲು ದಾವಣಗೆರೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಈ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಇಬ್ರಾಹೀಮ್ ಕೊಲೆಗಾರ ಎಂಬುದು ದೃಢಪಟ್ಟಿದೆ. ಬಳಿಕ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.