ಮಂಗಳೂರು: ಶ್ರಾದ್ದಕ್ಕೆ ಬಂದಿದ್ದ ಯುವತಿಯರು ಸಮುದ್ರ ಸ್ನಾನ ಮಾಡಲು ತೆರಳಿರುವ ವೇಳೆ ಬೃಹತ್ ಗಾತ್ರದ ಅಲೆಗೆ ಸಿಲುಕಿ ನೀರು ಪಾಲಾದ ಘಟನೆ ಸುರತ್ಕಲ್ನ ಎನ್ಐಟಿಕೆ ಬೀಚ್ನಲ್ಲಿ ನಡೆದಿದೆ.
ಮಂಗಳೂರಿನ ನಿವಾಸಿಗಳಾದ ವೈಷ್ಣವಿ (21) ತ್ರಿಷಾ (17) ಮೃತ ದುರ್ದೈವಿಗಳು.
ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿಯ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆಗೆ ಎನ್ಐಟಿಕೆ ಬೀಚ್ ಗೆ ಆಗಮಿಸಿದ್ದರು. ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.