ಟ್ರಂಪ್ ಗೆ ‘ಯೂಟ್ಯೂಬ್’ ನಿಂದಲೂ ನಿರ್ಬಂಧ | ಹೊಸ ವೀಡಿಯೋ ಪೋಸ್ಟ್, ಲೈವ್ ಗೆ ತಡೆ

Prasthutha|

ವಾಷಿಂಗ್ಟನ್ : ಕಳೆದ ವಾರ ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಲ್ಲಿ ಕ್ಯಾಪಿಟೊಲ್ ಕಟ್ಟಡದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಹಿಂಸಾತ್ಮಕ ಗಲಭೆ ನಡೆಸಿದ ಹಿನ್ನೆಲೆಯಲ್ಲಿ, ಅವರಿಗೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳು ಈಗಾಗಲೇ ಬಹಿಷ್ಕಾರ ಹಾಕಿವೆ. ಇದೀಗ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಯೂಟ್ಯೂಬ್’ ಕೂಡ ಟ್ರಂಪ್ ಗೆ ನಿಷೇಧ ಹೇರಿದೆ.

- Advertisement -

ಟ್ರಂಪ್ ರ ಯೂಟ್ಯೂಬ್ ಚಾನೆಲ್ ಅನ್ನು ರದ್ದುಪಡಿಸಲಾಗಿದ್ದು, ಹೊಸ ವೀಡಿಯೊಗಳನ್ನು ಪೋಸ್ಟ್ ಮಾಡದಂತೆ ತಡೆ ಹಿಡಿಯಲಾಗಿದೆ. ಮುಂದಿನ ಏಳು ದಿನಗಳ ವರೆಗೆ ಟ್ರಂಪ್ ರ ಯೂಟ್ಯೂಬ್ ಚಾನೆಲ್ ನಲ್ಲಿ ಹೊಸ ವೀಡಿಯೋ ಪೋಸ್ಟ್ ಮಾಡುವುದಾಗಲೀ, ಲೈವ್ ಕಾರ್ಯಕ್ರಮ ನೀಡುವುದಕ್ಕಾಗಲೀ ತಡೆಯೊಡ್ಡಲಾಗಿದೆ. ಏಳು ದಿನಗಳ ನಂತರವೂ ಈ ನಿರ್ಬಂಧ ವಿಸ್ತರಣೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಆದರೆ ಟ್ರಂಪ್ ಈ ಗೆಲುವನ್ನು ಒಪ್ಪುತ್ತಿಲ್ಲ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆಪಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕಳೆದ ವಾರ ಕ್ಯಾಪಿಟೊಲ್ ಕಟ್ಟಡದ ಮೇಲೆ ದಾಳಿ ಮಾಡಿ, ಹಿಂಸಾಚಾರ ಎಸಗಿದ್ದಾರೆ.   



Join Whatsapp