‘ಕೋವಿಡ್ ನಿಯಂತ್ರಿಸುವಲ್ಲಿ ಆದಿತ್ಯನಾಥ್ ಸಂಪೂರ್ಣ ವಿಫಲರಾಗಿದ್ದಾರೆ’ : ಬಿಜೆಪಿ ಶಾಸಕ

Prasthutha|

ಹೊಸದಿಲ್ಲಿ : ಕೊರೋನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾದ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರೊಬ್ಬರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದಲ್ಲಿ ಕೋವಿಡ್ ನಿಯಂತ್ರಣ ಉತ್ತಮವಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಡಳಿತ ಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ. ರಾಜ್ಯದ ಶಾಸಕರಿಗೂ ಸಹ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ನಿಯಂತ್ರಿಸುವಲ್ಲಿ ಆದಿತ್ಯನಾಥ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕರಾದ ಸುರೇಂದ್ರಸಿಂಗ್ ಅವರು ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಜೆಪಿ ಶಾಸಕರು ಕೂಡ ಸರಿಯಾದ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ, ಇದು ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ ಎಂದು ಬೈರಿಯಾದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಆದಿತ್ಯನಾಥ್ ಸರಕಾರವನ್ನು ದೂಷಿಸಿದ್ದಾರೆ. ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ಯೋಗಿ ಆದಿತ್ಯನಾಥ್ ಈ ಹಿಂದೆ ಹೇಳಿದ್ದರು. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಎಚ್ಚರಿಸಿದ್ದರು.

ಆದರೆ ಉತ್ತರ ಪ್ರದೇಶದಲ್ಲಿ ತೀವ್ರ ಆಮ್ಲಜನಕದ ಕೊರತೆಯಿದೆ ಎಂದು ವರದಿಗಳು ಹೇಳುತ್ತವೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿರುವುದರಿಂದಾಗಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಗಳು ಸಿಗುತ್ತಿಲ್ಲ. ಹಲವರು ಆಮ್ಲಜನಕ ಸಿಗದೆ ಬೀದಿ ಬದಿಗಳಲ್ಲಿ ನರಳುತ್ತಿರುವುದು ಉತ್ತರಪ್ರದೇಶದಿಂದ ವರದಿಯಾಗುತ್ತಲೇ ಇದೆ.

Join Whatsapp