ಲಕ್ನೋ; ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಅಗಮಿಸಿ ಗೋರಖ್‌ಪುರ ನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಐದು ಅವಧಿಗೆ ಲೋಕಸಭೆಯಲ್ಲಿ ಗೋರಖ್‌ಪುರವನ್ನು ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ 3 ರಂದು ಯುಪಿ ಚುನಾವಣೆಯ ಆರನೇ ಹಂತದಲ್ಲಿ ಗೋರಖ್‌ಪುರ ನಗರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಯೋಗಿ ಆದಿತ್ಯನಾಥ್ ಆಸ್ತಿ ವಿವರ
ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಯೋಗಿ ಆದಿತ್ಯನಾಥ್ 1,54,94,054 ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದು ಕೈಯಲ್ಲಿರುವ ನಗದು, ಆರು ಬ್ಯಾಂಕ್ ಖಾತೆಗಳ ಬಾಕಿ ಮತ್ತು ಉಳಿತಾಯವನ್ನು ಒಳಗೊಂಡಿರುತ್ತದೆ. 12,000 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಫೋನ್, 1,00,000 ರೂಪಾಯಿ ಮೌಲ್ಯದ ರಿವಾಲ್ವರ್ ಮತ್ತು 80,000 ರೂಪಾಯಿ ಮೌಲ್ಯದ ರೈಫಲ್ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಸ್ತಿ ಸುಮಾರು 59 ಲಕ್ಷ ರೂಪಾಯಿಗಳಷ್ಟು ಹೆಚ್ಚಾಗಿದೆ. ಎಂಎಲ್ಸಿಯಾಗಿ ಆಯ್ಕೆಯಾಗುವ ವೇಳೆಗೆ ಯೋಗಿ ಆದಿತ್ಯನಾಥ್ ಅವರ ಆಸ್ತಿ 95.98 ಲಕ್ಷ ರೂ.ಗಳಾಗಿದ್ದು, ಇದೀಗ 1,54,940,54ರೂ.ಗೆ ಏರಿಕೆಯಾಗಿದೆ.
ಚುನಾವಣಾ ಸುಧಾರಣೆಗಳ ಅಡ್ವೊಕಸಿ ಗ್ರೂಪ್ ಎಡಿಆರ್ ಪ್ರಕಾರ, ಮಥುರಾದ ಬಿಎಸ್‌ಪಿ ಅಭ್ಯರ್ಥಿ ಎಸ್‌ಕೆ ಶರ್ಮಾ ಮತ್ತು ಸಿಕಂದರಾಬಾದ್’ನ ಸಮಾಜವಾದಿ ಪಕ್ಷದ ಅಭ್ಯರ್ಥಿ ರಾಹುಲ್ ಯಾದವ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಗೆ ಮಥುರಾ ಕಂಟೋನ್ಮೆಂಟ್‌ನ ಬಿಜೆಪಿ ಅಭ್ಯರ್ಥಿ ಅಮಿತ್ ಅಗರ್‌ವಾಲ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.