ಬೆಂಗಳೂರು: ಕಾಂಗ್ರೆಸ್ ಬದಲು ಜೆಡಿಎಸ್ ನಿಂದಲೇ ಯೋಗೇಶ್ವರ್ ನಿಲ್ಲಬಹುದಿತ್ತು. ಎನ್ ಡಿಎಗೆ ಅನುಕೂಲ ಆಗುತ್ತಿತ್ತು. ಸಿಪಿವೈ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ. ಬಿಜೆಪಿಯ ಸಿದ್ಧಾಂತದಿಂದ ಬಂದವರಲ್ಲ. ಸೈಕಲ್ ಪಾರ್ಟಿ, ಪಕ್ಷೇತರ, ಬೇರೆ ಬೇರೆ ಪಕ್ಷದಿಂದ ಬಂದವರು. ನಾವೂ ಕೂಡ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಮಾಡಿದ್ದೆವು, ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೆವು. ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂದು ಸುದ್ದಿ ಇದೆ. ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ ಎಂದರು.
ನಾವೆಲ್ಲರೂ ಇದು ಜೆಡಿಎಸ್ ಟಿಕೆಟ್, ಹೆಚ್ ಡಿಕೆ ಅವರೇ ತೀರ್ಮಾನ ಮಾಡಬೇಕು ಅಂತನೇ ಹೇಳಿಕೊಂಡು ಬಂದಿದ್ದೆವು. ಹೆಚ್ ಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಚಿಹ್ನೆ ಯಡಿ ಸ್ಪರ್ಧೆಗೆ ಆಫರ್ ಕೊಟ್ಟರು. ಯಾವ ಚಿನ್ಹೆ ಆದರೇನು ಇಲ್ಲಿದ್ದರೆ ಎನ್ ಡಿಎಯಿಂದನೇ ಸ್ಪರ್ಧೆ ಮಾಡುತ್ತಿದ್ದರು. ಸಿಪಿವೈ ನಮ್ಮಲ್ಲಿ ಸೀನಿಯರ್ ಲೀಡರ್ ಆಗಿದ್ದರು. ಈಗ ಕಾಂಗ್ರೆಸ್ ನಲ್ಲಿ ಲಾಸ್ಟ್ ಬೆಂಚ್ ಆಗುತ್ತಾರೆ. ಅವರನ್ನು ಅಲ್ಲಿ ಬೆಳೆಯಲು ಡಿಕೆಶಿ ಬಿಡಲ್ಲ. ಕಾಂಗ್ರೆಸ್ ಸೇರಿ ಸಿಪಿವೈ ತಮ್ಮ ಭವಿಷ್ಯ ಹಾಳು ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು.