ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ: ನೀವು ತಿಳಿಯಲೇಬೇಕಾದ ಅಂಶಗಳು

Prasthutha|

ಬೆಂಗಳೂರು: ದಶಕದ ಕಾಯುವಿಕೆ ಬಳಿಕ ಇಂದು ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಲೋಕಾರ್ಪಣೆಗೊಂಡಿದೆ.

- Advertisement -


ಆ ಮೂಲಕ ಅನೇಕ ವಿಳಂಬ, ಗಣನೀಯ ಪ್ರಮಾಣದ ಯೋಜನಾ ವೆಚ್ಚ ಹೆಚ್ಚಳ, ವಿರೋಧ, ಪ್ರತಿರೋಧಗಳ ಮಧ್ಯೆ ಕುಟುಂತ್ತಾ ಸಾಗುತ್ತಿರುವ ಯೋಜನೆ ದಶಕದ ಬಳಿಕ ಮೊದಲ ಹೆಜ್ಜೆ ಯಶಸ್ವಿಯಾಗಿದೆ.
ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಿಗೆ ಹರಿಸುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಇದು.


ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕುಗಳ 38 ಪಟ್ಟಣ ಪ್ರದೇಶಗಳ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು. ಹಾಗೂ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 9.953 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂರ್ತಜಲ ಮರುಪೂರಣ ಮಾಡುವ ಮಹತ್ವದ ಯೋಜನೆ ಇದಾಗಿದೆ.

- Advertisement -


ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ 80ರ ದಶಕದಲ್ಲೇ ನೇತ್ರಾವತಿ ತಿರುವು ಯೋಜನೆಯನ್ನು ಪ್ರಸ್ತಾವಿಸಿ, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದರು. 2010ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದರು.

ನೀವು ತಿಳಿಯಲೇಬೇಕಾದ ಅಂಶಗಳು

  1. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆ 2014ರಲ್ಲಿ ಆರಂಭಗೊಂಡಿತ್ತು.
  2. 2014ರಲ್ಲಿ 8500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ.
  3. ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನಹೊಳೆ ಭಾಗದ ನೀರು ಹರಿದು ಸಮುದ್ರ ಸೇರುವುದನ್ನು ತಡೆದು 24 ಟಿಎಂಸಿ ನೀರನ್ನು ನದಿಗೆ ವಿರುದ್ಧವಾಗಿ ಪೈಪ್ಲೈನ್ ಹಾಗೂ ಕಾಲುವೆ ಮೂಲಕ ಹರಿಸಿ ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಹಮ್ಮಿಕೊಂಡಿರುವ ಯೋಜನೆ ಇದಾಗಿದೆ.
  4. ಸಕಲೇಶಫುರ ತಾಲ್ಲೂಕಿನ ದೊಡ್ಡನಗರ ಬಳಿಯ ವಿತರಣಾ ತೊಟ್ಟಿ 3ರ ಬಳಿ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗಿದೆ.
  5. ಒಟ್ಟು 261 ಕಿಲೋಮೀಟರ್ ಪೈಕಿ 162 ಕಿಲೋಮೀಟರ್ ಕೆಲಸ ಸಂಪೂರ್ಣ ಮುಗಿದಿದೆ. 25 ಕಿಲೋಮೀಟರ್ ಕೆಲಸ ಪ್ರಗತಿಯಲ್ಲಿದೆ, ಇನ್ನುಳಿದ 50 ಕಿಲೋಮೀಟರ್ ಪೈಕಿ 19 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಕಾಲುವೆ ಆಗಬೇಕಿದ್ದು ಅದರ ಕಾಮಗಾರಿ ಕೂಡ ನಡೆಯುತ್ತಿದೆ.
  6. ಮಳೆಗಾಲ ಆರಂಭವಾಗುವ ಜೂನ್ 1ರಿಂದ ಅಕ್ಟೋಬರ್ 31ರ ವರೆಗೆ ಒಟ್ಟು 139 ದಿನಗಳು ನಿತ್ಯ 1500 ಕ್ಯುಸೆಕ್ ನೀರಿನಂತೆ 24 ಟಿಎಂಸಿ ನೀರು ಹರಿಸಲು ಉದ್ದೇಶಿಸಲಾಗಿದೆ.


Join Whatsapp