ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ನೂತನ ಸಚಿವರ ಅಂತಿಮ ಪಟ್ಟಿ ಹೊರಬೀಳುತ್ತಿದ್ದಂತೆ, ಸಚಿವ ಸ್ಥಾನ ಸಿಗದ ಅಸಮಾಧಾನಿತ ಶಾಸಕರು ಸಿಡಿದೆದ್ದಿದ್ದಾರೆ. ಇದೀಗ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ಗಂಭೀರ ಆರೋಪಗಳನ್ನು ಮಾಡುವುದರ ಜೊತೆಗೆ, ಕಟುಪದಗಳಿಂದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪಗೆ ವಿನಾಶಕಾಲೇ ವಿಪರೀತ ಬುದ್ದಿ, ಇದು ಅಂತ್ಯಕಾಲ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ಬ್ಲಾಕ್ ಮೇಲ್ ಗೊಳಗಾಗಿ ಅವರು ಸಚಿವ ಸ್ಥಾನ ಹಂಚಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಯಾರು ದುಡ್ಡುಕೊಡುತ್ತಾರೆ, ಯಾರು ಬ್ಲಾಕ್ ಮೇಲ್ ಮಾಡುತ್ತಾರೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಿಡಿ ತೋರಿಸಿ ಇಬ್ಬರು ಸಚಿವರಾಗಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಯತ್ನಾಳ್ ಹೇಳಿದ್ದಾರೆ.
ಹಿಂದೂ ವಿರೋಧಿ ಸಂದೇಶ ನೀಡಿದವರಿಗೆ ಸ್ಥಾನ ನೀಡಲಾಗಿದೆ. ಇವೆಲ್ಲಾ ಹಿಂದೂ ವಿರೋಧಿ ನೀತಿ, ಈ ಬಗ್ಗೆ ಕೇಳುತ್ತೇನೆ. ಬ್ರಹ್ಮನ ಬಗ್ಗೆ, ರಾಮನ ಬಗ್ಗೆ, ಸೀತೆಯ ಬಗ್ಗೆ ಅಸಹ್ಯವಾದ ಸಂದೇಶ ರವಾನೆ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲು ಪಕ್ಷಕ್ಕೆ ದುಡಿದವರಿಗೆ ಒಂದು ಕೋಟಾ, ಸರಕಾರ ಬರಲಿಕ್ಕೆ ಕಾರಣರಾದವರಿಗೊಂದು ಜಾತೀವಾರು ಕೋಟಾ ಇರುತಿತ್ತು, ಈಗ ಯಡಿಯೂರಪ್ಪನವರು ಹೊಸದಾಗಿ ಸಿಡಿ(CD) ಕೋಟಾ, ಸಿಡಿ ಮತ್ತು ಹಣ ಕೊಟ್ಟವರಿಗೊಂದು ಕೋಟಾ ಸೇರ್ಪಡೆಗೊಳಿಸಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ನಮ್ಮ ಸಮುದಾಯದ ಮರ್ಯಾದೆ ಉಳಿಸಬೇಕಾದರೆ, ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಅವರು ಒತ್ತಾಯಿಸಿದ್ದಾರೆ.