ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ನಡೆದ ತೆರೆಮರೆಯ ವಿದ್ಯಮಾನಗಳು ಒಂದೊಂದೇ ಹೊರಬರುತ್ತಿವೆ. ತಕ್ಷಣವೇ ರಾಜೀನಾಮೆ ನೀಡಿ, ಇಲ್ಲದಿದ್ದರೆ ವಜಾಗೊಳಿಸಬೇಕಾಗುತ್ತದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.
“ಸಂಜೆಯೊಳಗೆ ರಾಜೀನಾಮೆ ನೀಡದಿದ್ದರೆ, ಸಂಪುಟದಿಂದ ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತೇವೆ” ಎಂದು ಸಚಿವ ಸಂಪುಟ ಸಭೆಯಲ್ಲೇ ನಾಗೇಶ್ ಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ಸಭೆಗೂ ಮುನ್ನಾ ಏಳು ನೂತನ ಶಾಸಕರನ್ನು ಸೇರಿಸಿಕೊಳ್ಳುವ ಬಗ್ಗೆ ಯಡಿಯೂರಪ್ಪ ಪ್ರಕಟಿಸಿದ್ದರು. ರಾಜೀನಾಮೆ ನೀಡುವಂತೆ ನಾಗೇಶ್ ಗೆ ಮೊದಲೇ ಸೂಚಿಸಲಾಗಿತ್ತು. ಆದರೂ ಅವರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುತ್ತಿದ್ದಂತೆ, ಅವರ ಬೆಂಬಲಿಗರು ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. “ಬಲಗೈ ಸಮುದಾಯಕ್ಕೆ ಸೇರಿದ ನಾಗೇಶ್ ಅವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಬಿಜೆಪಿ ಸರಕಾರ ರಚನೆಯಾಗಲು ಪ್ರಮುಖ ಕಾರಣರೂ ಆಗಿದ್ದು, ಇತ್ತೀಚಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕಾರಣರಾಗಿದ್ದಾರೆ ಎಂದು ನಾಗೇಶ್ ಬೆಂಬಲಿಗರು ಪ್ರತಿಪಾದಿಸಿದರು.