ಯತ್ನಾಳ್, ಸೋಮಣ್ಣ ಪಾಪದ ಕೊಡ ತುಂಬಿದೆ: ರೇಣುಕಾಚಾರ್ಯ

Prasthutha|

ದಾವಣಗೆರೆ: ತನ್ನ ಪಕ್ಷದ ಶಾಸಕ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಸಮರ ಘೋಷಿಸಿದಂತಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಈ ಸಲ ಮಾಜಿ ಸಚಿವ ವಿ. ಸೋಮಣ್ಣರನ್ನೂ ಸೇರಿಸಿ ವಾಗ್ದಾಳಿ ನಡೆಸಿದ್ದಾರೆ. ಇಬ್ಬರೂ ರಾಜಕೀಯವಾಗಿ ಅಂತ್ಯವಾಗುವ ಲಕ್ಷಣ ಎನ್ನುವಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಬ್ಬರ ಪಾಪದ ಕೊಡ ತುಂಬಿದೆ ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್, ಸೋಮಣ್ಣ ಇಬ್ಬರೂ ಬ್ಲಾಕ್ ಮೇಲ್ ರಾಜ ಕಾರಣ ಬಿಡಬೇಕು. ಇಬ್ಬರ ಪಾಪದ ಕೊಡ ತುಂಬಿದೆ ಎಂದು ಪುನರುಚ್ಚರಿಸಿದ್ದಾರೆ.

ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಅವರನ್ನು ರಾಜ್ಯದ ಜನರ ಮುಂದೆ ವಿಲನ್ ಮಾಡಲು ಇಬ್ಬರೂ ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆ ಎಂದು ನಾವೂ ಹೇಳುತ್ತೇವೆ.ಯಾರಿಗೂ ಸೊಪ್ಪು ಹಾಕಬೇಕಿಲ್ಲ ಮಾತ್ರವಲ್ಲ ಹೆದರಬೇಕಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

- Advertisement -

ಯತ್ನಾಳ್ ಮತ್ತು ಸೋಮಣ್ಣ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಎಲ್ಲರೂ ಒಂದಾಗಿ ಬಿಜೆಪಿಯಲ್ಲಿ ಮುನ್ನಡೆಯಬೇಕು. ಏನಾದರೂ ಸಮಸ್ಯೆ ಇದ್ದರೆ ಪಕ್ಷದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದರೆ ಸಹಿಸಿಕೊಂಡಿರಲು ಸಾಧ್ಯ ಇಲ್ಲ ಎಂದರು.

ಸೋಮಣ್ಣ ಅವರು ಸುಳ್ಳನ್ನು ಬಹಳ ಚೆನ್ನಾಗಿ ವೈಭವೀಕರಿಸುವ ಚಾಕುಚಕ್ಯತೆ ಹೊಂದಿರುವ ವ್ಯಕ್ತಿ. ಕಾಂಗ್ರೆಸ್‌ನಿಂದ ಬಂದ ಅವರಿಗೆ ಟೀಕಿಸುವ ಯಾವ ಹಕ್ಕು ಇದೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.



Join Whatsapp