ವಿಜಯಪುರ: ಮುಖ್ಯಮಂತ್ರಿ ಕುರ್ಚಿಗೆ 2500 ಕೋಟಿ ರೂ. ಕೇಳಿದ್ದಾರೆ ಎಂದು ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ನಡೆದ ವೀರರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ಮೇಲೆ ಮಾತನಾಡಿದ ಯತ್ನಾಳ್, ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಮಂತ್ರಿಗಿರಿ ಪಡೆದಿದ್ದಾರೆ. ಯಾರ್ಯಾರದ್ದೋ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ. ಹೀಗೆ ಅವರ ವಿಕ್ನೇಸ್ ಪತ್ತೆ ಮಾಡಿ ಸಿಡಿ ಮಾಡಿ ಅದನ್ನ ತೋರಿಸಿ ಸಚಿವ ಸ್ಥಾನ ಪಡೆದವರು ನಮ್ಮ ಬಿಜೆಪಿಯಲ್ಲೆ ಇದ್ದಾರೆ. ಇವರ ಅರ್ಹತೆಯಿಂದ ಮಂತ್ರಿಯಾಗಿಲ್ಲ ಎನ್ನುವ ಮೂಲಕ ಸ್ವಪಕ್ಷೀಯ ಪ್ರಭಾವಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ನನಗೆ 50 ಕೋಟಿ, 100 ಕೋಟಿ ಕೊಡಿ ಅಂದ್ರೆ ಎಲ್ಲಿಂದ ಕೊಡಲಿ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಅದೇ 50 ಕೋಟಿ ನನ್ನ ಬ್ಯಾಂಕಿನಲ್ಲಿಟ್ಟರೆ ತಿಂಗಳಿ 50 ಲಕ್ಷ ಬಡ್ಡಿ ಬರುತ್ತೆ. 25 ಖರ್ಚು ಮಾಡಿ ಇನ್ನು 25ಲಕ್ಷ ಜನರಿಗೆ ಕೊಟ್ಟು ಆರಾಮಾಗಿರಿ ಇರಬಹುದು. ಅವರಿವರ ಕೈ ಕಾಲು ಬಿದ್ದು, ಯಪ್ಪಾ-ಯಣ್ಣಾ ಅನ್ನೋದ್ಯಾಕೆ ಎಂದಿದ್ದಾರೆ. ಈ ಮೂಲಕ 50, 100 ಕೋಟಿ ಕೊಟ್ಟು ಸಚಿವ ಸ್ಥಾನ ಪಡೆದವರು ಇದ್ದಾರೆ ಎಂದು ತಮ್ಮದೆ ದಾಟಿಯಲ್ಲಿ ಯತ್ನಾಳ್ ಕೋಟಿ-ಕೋಟಿಯ ಬಾಂಬ್ ಸಿಡಿಸಿದರು.