►ಯಾವುದೇ ಕಾರಣಕ್ಕೂ ಮುಸ್ಲಿಮರು ಪ್ರತೀಕಾರಾತ್ಮಕವಾಗಿ ವರ್ತಿಸಬಾರದು
ಬೆಂಗಳೂರು: ಸಂಘಪರಿವಾರವು ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಮೂಲಕ ಕೋಮು ಧ್ರುವೀಕರಣದ ಷಡ್ಯಂತ್ರವನ್ನು ರೂಪಿಸುತ್ತಿದೆ. ಆದರೆ ಮುಸ್ಲಿಮ್ ಸಮುದಾಯವು ಇಂತಹ ಪಿತೂರಿಗಳನ್ನು ಪ್ರಜ್ಞಾವಂತಿಕೆಯನ್ನು ಸೋಲಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿಂದೂಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವಂತಹ ಬೆಳವಣಿಗೆಗಳು ಅವಿಭಜಿತ ದ.ಕ.ಜಿಲ್ಲೆ ಸಹಿತ ರಾಜ್ಯದ ಕೆಲವೊಂದು ಕಡೆಗಳಲ್ಲಿ ಕಂಡು ಬರುತ್ತಿವೆ. ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಬ್ಯಾನರ್ ಗಳನ್ನು ಕೂಡ ಕೆಲವೊಂದು ಕಡೆ ಅಳವಡಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಪ್ರಯತ್ನವನ್ನು ಅಲ್ಲಿನ ಬಹುಸಂಖ್ಯಾತ ಹಿಂದುಗಳೇ ವಿಫಲಗೊಳಿಸಿದ್ದಾರೆ. ಮುಲ್ಕಿ ಸಮೀಪದ ಬಪ್ಪನಾಡು ದೇವಸ್ಥಾನದಲ್ಲೂ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಕೂಡಲೇ ಎಚ್ಚೆತ್ತುಕೊಂಡ ದೇವಸ್ಥಾನ ಆಡಳಿತ ಮಂಡಳಿಯು ದೇವಸ್ಥಾನದ ಹೆಸರಿನಲ್ಲಿ ಅಥವಾ ಸಮಸ್ತ ಹಿಂದು ಬಾಂಧವರ ಹೆಸರಿನಲ್ಲಿ ಅಳವಡಿಸಿದ ಬ್ಯಾನರ್ ಗೂ, ದೇವಸ್ಥಾನ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸಂಘಪರಿವಾರ-ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಕೆಲವೊಂದು ದೇವಸ್ಥಾನಗಳಲ್ಲಿ ಇಂತಹ ಒಂದು ಸಂವಿಧಾನ ವಿರೋಧಿ ತೀರ್ಮಾನ ಕೈಗೊಳ್ಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಸಂಘಪರಿವಾರದ ಸಣ್ಣ ವರ್ಗವೊಂದು ಸೃಷ್ಟಿಸಿರುವ ಇಂತಹ ದ್ವೇಷದ ಕ್ರಮಗಳಿಗೆ ಬಹುಸಂಖ್ಯಾತ ಹಿಂದುಗಳ ಬೆಂಬಲವಿಲ್ಲ ಎಂಬುದು ಸ್ಪಷ್ಟವಾಗಿದೆ. ಇದೀಗ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಪ್ರಯತ್ನವನ್ನು ಸಂಘಪರಿವಾರದ ಕೋಮು ಅಜೆಂಡಾಗಳ ಭಾಗವಾಗಿಯೇ ನೋಡಬೇಕಾಗುತ್ತದೆ. ಹಿಂದು-ಮುಸ್ಲಿಮರು ವ್ಯಾಪಾರ ವಹಿವಾಟುಗಳಲ್ಲಿ ಪರಸ್ಪರ ಬೆಸೆದುಕೊಂಡಿದ್ದಾರೆ. ಈ ಮೂಲಕ ಅವರು ಪರಸ್ಪರ ಸಾಮರಸ್ಯ-ಸಹಬಾಳ್ವೆಯ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಕೋಮು ಸೌಹಾರ್ದವನ್ನು ಬಯಸದ ಸಂಘಪರಿವಾರವು ತನ್ನ ಕೋಮು ಅಜೆಂಡಾವನ್ನು ಜಾರಿಗೊಳಿಸಲು ಇಂತಹ ಒಂದು ದುಷ್ಟ ಷಡ್ಯಂತ್ರವನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಘಪರಿವಾರದ ಈ ರೀತಿಯ ಪಿತೂರಿಗಳ ಕುರಿತಂತೆ ಮುಸ್ಲಿಮ್ ಸಮುದಾಯವು ಜಾಗೃತವಾಗಿರಬೇಕು. ಸಂಘಪರಿವಾರದ ಸಣ್ಣ ವರ್ಗವೊಂದು ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದ ಮಾತ್ರಕ್ಕೆ ಯಾವುದೇ ಕಾರಣಕ್ಕೂ ಅದಕ್ಕೆ ಪ್ರತೀಕಾರಾತ್ಮಕವಾಗಿ ವರ್ತಿಸಬಾರದು. ಉದಾಹರಣೆ, ಹಿಂದೂಗಳ ಅಂಗಡಿಗಳನ್ನು ಬಹಿಷ್ಕರಿಸುವುದು ಅಥವಾ ಜಾತ್ರಾ ಮಹೋತ್ಸವಗಳಿಗೆ ನಿರ್ಬಂಧ ಹೇರಿದ ಕಾರಣಕ್ಕೆ ರಮಝಾನ್ ವೇಳೆ ಹಿಂದೂಗಳ ಅಂಗಡಿಗಳನ್ನು ಬಹಿಷ್ಕರಿಸುತ್ತೇವೆ ಎಂಬ ಮನೋಭಾವ ತಾಳುವುದು ಕೂಡ ಸಂಘಪರಿವಾರದ ಕೋಮು ಧ್ರವೀಕರಣದ ಷಡ್ಯಂತ್ರಗಳಿಗೆ ಯಶಸ್ಸು ದೊರಕಿಸಿ ಕೊಟ್ಟಂತಾಗಬಹುದು. ಆರೆಸ್ಸೆಸ್-ಸಂಘಪರಿವಾರವು ಪ್ರತಿಬಾರಿಯೂ ಹಿಂದೂ-ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ ಮುಸ್ಲಿಮ್ ಸಮುದಾಯವು ಇಂತಹ ಪಿತೂರಿಗಳನ್ನು ಪ್ರಜ್ಞಾವಂತಿಕೆಯಿಂದ ಸೋಲಿಸಬೇಕಾದೆ ಎಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.