ಮೈಸೂರು: ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಪ್ರತಿನಿಧಿಸುತ್ತಿರುವ ಮೈಸೂರು-ಕೊಡಗು ಕ್ಷೇತ್ರಕ್ಕೆ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹೆಸರು ಚರ್ಚೆಗೆ ಬಂದಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಬದಲಾವಣೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಈ ಸಂಬಂಧವಾಗಿ ಮಾತನಾಡಿದ ಅವರು, ಪಕ್ಷದ ಪಾರ್ಲಿಮೆಂಟರಿ ಬೋರ್ಡಿನಲ್ಲಿ ಏನಾದರೂ ಆಗಬಹುದು. ಅಲ್ಲಿಯ ತನಕ ಎಲ್ಲರೂ ಕಾಯಬೇಕಾಗುತ್ತದೆ. ಸದ್ಯಕ್ಕೆ ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹೊಸ ಮುಖಕ್ಕೆ ಮಣೆ ಹಾಕುವುದು ಪಕ್ಷದಲ್ಲಿ ಸಾಮಾನ್ಯ. ಹೊಸ ಚಿಗುರು, ಹಳೆ ಬೇರು ಎಂಬುದು ನಡೆಯುತ್ತಲೇ ಇರುತ್ತದೆ. ರಾಜಕೀಯದಲ್ಲಿ ಇದೇ ನಿಶ್ಚಿತ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಈ ನಡುವೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಂಸದ ಪ್ರತಾಪ್ ಸಿಂಹ, ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನ. ರಾಜ್ಯದಲ್ಲಿ 28 ಮಂದಿ ಸಂಸದರಿದ್ದಾರೆ. ಅವರ ಕೆಲಸ ನೋಡಿ ಟಿಕೆಟ್ ನೀಡುತ್ತಾರೆ. ಜನ ಖುಷಿಯಾಗಿದ್ದಾರೆಂದರೆ ಮೇಲಿನವರು ಅದೇ ರೀತಿಯ ನಿರ್ಧಾರ ಮಾಡುತ್ತಾರೆ. ಜನ ನನ್ನ ಕೈ ಹಿಡಿಯಲು ರೆಡಿ ಇದ್ದಾರೆ. ಅದೇ ರೀತಿ ಪಕ್ಷ ಕೂಡ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ. ನನಗೇ ಈ ಬಾರಿಯೂ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಸಿಗಲಿದೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.