ಜೈಪುರ: ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಪದಕಗಳನ್ನು ಹಿಂದಿರುಗಿಸಿರುವುದು, ಮಹಿಳೆಯರು ಹಾಗೂ ಅವರ ಸುರಕ್ಷತೆಯ ಬಗ್ಗೆ ಬಿಜೆಪಿಗಿರುವ ಅಸೂಕ್ಷ್ಮತೆಯ ಮನೋಭಾವವನ್ನು ತೋರಿಸಿದೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ ಸಾಕ್ಷಿ ಮಲಿಕ್ ಅವರ ವಿದಾಯ ಹಾಗೂ ಬಜರಂಗ್ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿರುವುದು, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವ ಬಿಜೆಪಿಯ ಉದ್ದೇಶದ ಬಗ್ಗೆ ಪ್ರಶ್ನೆಯನ್ನು ಎತ್ತಿದೆ’.‘ಕುಸ್ತಿಪಟುಗಳ ವಿಷಯದಲ್ಲಿ ಬಿಜೆಪಿ ತೋರುತ್ತಿರುವ ದುರುದ್ದೇಶ ಮತ್ತು ಸಂತ್ರಸ್ತರ ಬೇಡಿಕೆಗಳನ್ನು ಕಡೆಗಣಿಸಿರುವುದು ಖಂಡನೀಯ ಹಾಗೂ ದುಃಖಕರ. ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಬಿಜೆಪಿ ಹೊಂದಿರುವ ಅಸೂಕ್ಷ್ಮತೆಯನ್ನು ಬಹಿರಂಗಪಡಿಸುತ್ತಿದೆ’ ಎಂದು ಗೆಹಲೋತ್ ವಾಗ್ದಾಳಿ ನಡೆಸಿದ್ದಾರೆ.