ಆದಷ್ಟು ಬೇಗ ಪರಿಹಾರಕ್ಕಾಗಿ ಆಶಿಸುತ್ತೇನೆ: ಕುಸ್ತಿಪಟುಗಳಿಗೆ ಬೆಂಬಲ ನೀಡಿದ ಅನಿಲ್ ಕುಂಬ್ಳೆ

Prasthutha|

ಹೊಸದಿಲ್ಲಿ: ಮೇ 28 ರಂದು ದೆಹಲಿ ಪೊಲೀಸರು ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಕುಸ್ತಿಪಟುಗಳನ್ನು ಬಲವಂತವಾಗಿ ತೆರವು ಮಾಡಿದ ರೀತಿಯಿಂದ ನನಗೆ ಬೇಸರವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಮಂಗಳವಾರ ಹೇಳಿದ್ದಾರೆ.

- Advertisement -

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 28 ರಂದು ನಮ್ಮ ಕುಸ್ತಿಪಟುಗಳ ಜತೆ ನಡೆದಿರುವ ವಿಷಯ ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಯಾವುದೇ ವಿಷಯವನ್ನೂ ಪರಿಹರಿಸಬಹುದು. ಆದಷ್ಟು ಬೇಗ ಸಮಸ್ಯೆ ಪರಿಹಾರವಾಗಲಿ ಎಂದು ಆಶಿಸುತ್ತಿರುವುದಾಗಿ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯಲು ನಿರ್ಧರಿಸಿದ್ದರು. ಇದಕ್ಕಾಗಿ ತಾವು ಗೆದ್ದ ಪದಕಗಳನ್ನು ತೆಗೆದುಕೊಂಡು ಕುಸ್ತಿಪಟುಗಳು ಹರಿದ್ವಾರಕ್ಕೆ ಬಂದಿದ್ದರು. ಈ ಹೊತ್ತಲ್ಲಿ ರೈತರ ನಾಯಕ ನರೇಶ್ ಟಿಕಾಯತ್ ಅವರು ಹರಿದ್ವಾರದ ಹರ್ ಕಿ ಪೌರಿ ಘಾಟ್‌ಗೆ ಆಗಮಿಸಿದ್ದಾರೆ. ಅಲ್ಲಿ ಕುಸ್ತಿಪಟುಗಳೊಂದಿಗೆ ಮಾತನಾಡಿ ಅವರು ನೀವು ಕಷ್ಟಪಟ್ಟು ಸಂಪಾದಿಸಿದ ಪದಕಗಳನ್ನು ಪವಿತ್ರ ನದಿಯಾದ ಗಂಗಾದಲ್ಲಿ ಬಿಸಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ನಂತರ ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

- Advertisement -

ಕುಸ್ತಿಪಟುಗಳು ತಮ್ಮ ಪದಕಗಳನ್ನು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಅವರಿಗೆ ಹಸ್ತಾಂತರಿಸಿದ್ದಾರೆ. ಐದು ದಿನಗಳಲ್ಲಿ ನ್ಯಾಯ ದೊರಕಿಸಿಕೊಡಲು ಟಿಕಾಯತ್ ಸಹಾಯ ಮಾಡಬೇಕೆಂಬ ಷರತ್ತಿನೊಂದಿಗೆ ಕುಸ್ತಿಪಟುಗಳು ತಮ್ಮ ಪದಕಗಳನ್ನು ಹಸ್ತಾಂತರಿಸಿದ್ದಾರೆ.



Join Whatsapp