ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಖಾತ್ರಿಯಾಗಿದೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ್ ಕೂಟದ ಇತಿಹಾಸದಲ್ಲೇ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತೀಯರು ಸೆಮಿಫೈನಲ್ ಪ್ರವೇಶಿಸಿರುವುದು ಇದೇ ಮೊದಲ ಬಾರಿ. ಶುಕ್ರವಾರ 75 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಸಾತ್ವಿಕ್– ಚಿರಾಗ್ ಜೋಡಿ, 2ನೇ ಶ್ರೇಯಾಂಕದ ಜಪಾನ್‌ನ ಹೋಕಿ- ಕೊಬಯಾಶಿ ಅವರನ್ನು 24-22, 15-21, 21-14 ಅಂತರದಲ್ಲಿ ಸೋಲಿಸಿದ್ದಾರೆ.
ಆದರೆ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಕ್ವಾರ್ಟರ್ ಫೈನಲ್ ಪ್ರವೇಶಿಸಿ ನಿರೀಕ್ಷೆ ಮೂಡಿಸಿದ್ದ ಭಾರತದ ಎಂಆರ್ ಅರ್ಜುನ್- ಧ್ರುವ ಕಪಿಲಾ ಜೋಡಿ ಮುಗ್ಗರಿಸಿದ್ದಾರೆ. ಮೂರು ಬಾರಿ ಚಿನ್ನದ ಪದಕ ವಿಜೇತ ಇಂಡೋನೇಷ್ಯಾದ ಮುಹಮ್ಮದ್ ಅಹ್ಸನ್ ಮತ್ತು ಸೆಟಿಯವಾನ್ ಜೋಡಿ ವಿರುದ್ಧ 8- 21 14- 21 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. ಈ ಪಂದ್ಯವು ಕೇವಲ 30 ನಿಮಿಷಗಳ ಅಂತರದಲ್ಲೇ ಮುಗಿಯಿತು.
ಪ್ರಣಯ್ ಹೋರಾಟ ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನ ಭಾರತದ ಎಚ್ ಎಸ್ ಪ್ರಣಯ್ ಹೋರಾಟ ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯವಾಗಿದೆ. ಚೀನಾದ ಜಾವೊ ಜುನ್ ಪೆಂಗ್ ವಿರುದ್ಧ 3 ಸೆಟ್‌ಗಳ ಪಂದ್ಯದಲ್ಲಿ ಸೋಲುವ ಮೂಲಕ ಪ್ರಣಯ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್, ಭಾರತದವರೇ ಆದ, ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರನ್ನು ಮಣಿಸಿದ್ದರು.