ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಎಚ್‌ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನ
ಮೂರನೇ ಸುತ್ತಿನ ʻಭಾರತೀಯರ ನಡುವಿನ ಕದನʼದಲ್ಲಿ ಪ್ರಣಯ್, ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ವಿರುದ್ಧ 17-21, 21-16, 21-17 ಅಂತರದಲ್ಲಿ ಗೆದ್ದು ಎಂಟರ ಘಟ್ಟ ತಲುಪಿದ್ದಾರೆ. ಒಂದು ಗಂಟೆ, 15 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರರ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಎಂಟರ ಘಟ್ಟದಲ್ಲಿ ಪ್ರಣಯ್ , ಚೀನಾದ ಝಾವೊ ಜುನ್ ಪೆಂಗ್ ಸವಾಲನ್ನು ಎದುರಿಸಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದ ಸೈನಾ ನೆಹ್ವಾಲ್, ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 17-21, 21-16 13-21 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಸ್ಟಾರ್ ಶಟ್ಲರ್ ಪಿವಿ ಸಿಂಧು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಮಹಿಳಾ ವಿಭಾಗದಲ್ಲಿ ಒಲಿಂಪಿಯನ್ ಸೈನಾ ಭಾರತದ ಏಕೈಕ ಭರವಸೆಯಾಗಿ ಉಳಿದಿದ್ದರು.
ಪುರುಷರ ಡಬಲ್ಸ್‌ನಲ್ಲಿ ಗೆಲುವು
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್‌ನ ಜೆಪ್ಪೆ-ಲಾಸ್ಸೆ ಜೋಡಿ ವಿರುದ್ಧ 21-21-10 ಅಂತರದಲ್ಲಿ ಸುಲಭ ಜಯಗಳಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಈ ಪಂದ್ಯವು ಕೇವಲ 35 ನಿಮಿಷಗಳಲ್ಲೇ ಮುಕ್ತಾಯ ಕಂಡಿತು. ಪುರುಷರ ಡಬಲ್ಸ್‌ನ ಇನ್ನೊಂದು ಪಂದ್ಯದಲ್ಲಿ ಧ್ರುವ- ಅರ್ಜುನ್ ಜೋಡಿಯು 18–21, 21–15, 21–16ರಿಂದ ಸಿಂಗಪುರದ ಟೆರಿ ಹೀ ಹಾಗೂ ಕೀನ್ ಹೀನ್ ಜೋಡಿಯ ವಿರುದ್ಧ ಜಯಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.