ಲಂಡನ್: 83 ವರ್ಷ ವಯಸ್ಸಿನ ವೃದ್ಧರೊಬ್ಬರು ಒಂದೇ ಕಂಪನಿಯಲ್ಲಿ ಕಳೆದ 70 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರೂ, ಇದುವರೆಗಿನ 70 ವರ್ಷಗಳ ಸೇವಾ ಅವಧಿಯಲ್ಲಿ ಒಂದೇ ಒಂದು ದಿನವೂ ‘ಅನಾರೋಗ್ಯ ರಜೆ’ಯನ್ನು ಪಡೆಯದೇ ಸತತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಪರೂಪದ ಪ್ರಕರಣವೊಂದು ಬ್ರಿಟನ್’ನಿಂದ ವರದಿಯಾಗಿದೆ.
83 ವರ್ಷ ವಯಸ್ಸಿನ ಬ್ರಿಯಾನ್ ಚೋರ್ಲೆ, ತಮ್ಮ ಶಾಲಾ ದಿನಗಳಲ್ಲಿ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಬ್ರಿಟನ್’ನ ಸೋಮರ್’ಸೆಟ್ ನ ಬೀದಿಯಲ್ಲಿದ್ದ C&J ಕ್ಲಾರ್ಕ್ ಕಾರ್ಖಾನೆಯಲ್ಲಿ ತನ್ನ 13 ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ್ದರು.
ಖ್ಯಾತ ಪಾದರಕ್ಷೆ ತಯಾರಕ ಕಂಪನಿಯಾದ ‘ಕ್ಲಾರ್ಕ್ಸ್’ ಕಂಪನಿಯಲ್ಲಿ ಅಂದಿನಿಂದ ಇಂದಿನವರೆಗೂ ಉದ್ಯೋಗಿಯಾಗಿರುವ ಬ್ರಿಯಾನ್ ಯಾವುದೇ ಸಿಕ್ ಲೀವ್ ಪಡೆಯದೇ ಕರ್ತವ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದಲ್ಲದೆ, ಸದ್ಯಕ್ಕೆ ನಿವೃತ್ತಿ ಹೊಂದುವ ಯಾವುದೇ ಯೋಚನೆಯನ್ನು ತಾವು ಹೊಂದಿಲ್ಲ ಎಂದು ಚಾರ್ಲ್ಸ್ ಸ್ಪಷ್ಟಪಡಿಸಿದ್ದಾರೆ.
‘ಮಿರರ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಾರ್ಲ್ಸ್, ‘ 8 ವರ್ಷಗಳ ಹಿಂದೆ ನಾನು ಪತ್ನಿಯನ್ನು ಕಳೆದುಕೊಂಡೆ. ಮನೆಯಲ್ಲಿ ಒಂಟಿಯಾಗಿರಲು ನಾನು ಬಯಸುವುದಿಲ್ಲ. ನನ್ನ ಸಹೋದ್ಯೋಗಿಗಳು ಹಾಗೂ ಗ್ರಾಹಕರಿಗಾಗಿ ನಾನು ನನ್ನ ಜೀವನವನ್ನು ಮೀಸಲಿಟ್ಟಿದ್ದೇನೆ. ನನ್ನ ಸೇವೆಯ ಕುರಿತು ಗ್ರಾಹಕರು ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಹೀಗಾಗಿ ಎಷ್ಟು ಕಾಲ ಸಾಧ್ಯವೋ..ಅಷ್ಟು ಕಾಲ ನಾನು ಇಲ್ಲಿಯೇ ಇರುತ್ತೇನೆ’ ಎಂದಿದ್ದಾರೆ.