ವಾರಂತ್ಯದ ಕರ್ಫ್ಯೂ ಹೆಸರಿನಲ್ಲಿ ಕಾರ್ಮಿಕರ ತಾಳ್ಮೆ ಕೆದಕದಿರಿ: ಎಐಟಿಯುಸಿ ಎಚ್ಚರಿಕೆ

Prasthutha|

ಮಂಗಳೂರು: ಕೊರೋನಾ ನಿರ್ಮೂಲನೆಗಾಗಿ ಸರಕಾರಗಳು ತೆಗೆದುಕೊಂಡಿರುವ ಅವೈಜ್ಞಾನಿಕ ಕ್ರಮಗಳಿಂದಾಗಿ ಈಗಾಗಲೇ ಕಾರ್ಮಿಕ ವರ್ಗ ಹಾಗೂ ಜನಸಾಮಾನ್ಯರು ಆರ್ಥಿಕವಾಗಿ ಕುಸಿದಿದ್ದಾರೆ. ಕೆಲಸವಿಲ್ಲದೆ ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡು ಅಸಹಾಯಕರಾಗಿದ್ದಾರೆ. ಇದ್ದ ಕೆಲಸವನ್ನು ಮಾಡಿ ವಾರಾಂತ್ಯಕ್ಕೆ ಸಂಬಳ ಪಡೆಯಲೂ ಅನುಮತಿಸದ ಸರಕಾರ ಅವೈಜ್ಞಾನಿಕವಾಗಿ ವಾರಂತ್ಯದ ಕರ್ಫ್ಯೂ ಹೇರುವ ಮೂಲಕ ಕಾರ್ಮಿಕರ ತಾಳ್ಮೆಯನ್ನು ಕೆದಕಬಾರದು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಸರಕಾರವನ್ನು ಎಚ್ಚರಿಸಿದೆ.

- Advertisement -

ಕಳೆದೆರಡು ವರ್ಷಗಳಿಂದ ಕೋವಿಡ್ನ ನಿರ್ಮೂಲನೆಗಾಗಿ ಎರೆಡೆರಡು ಡೋಸ್ ಲಸಿಕೆ ಹಾಕಿಸಿಕೊಂಡರೂ, ನಿರಂತರ ಮುಖಗವಚ ಹಾಕಿಕೊಂಡರೂ, ಲಾಕ್ ಡೌನ್ ಹೇರಿದರೂ ಸಂಕಷ್ಟ ತಪ್ಪಲಿಲ್ಲ. ಈ ಸಾಂಕ್ರಾಮಿಕ ರೋಗವು ಪ್ರಕೃತಿ ಸಹಜವಾಗಿ ಬೇರೆ ಬೇರೆ ರೂಪಗಳಲ್ಲಿ ವಕ್ಕರಿಸುತ್ತಿದೆ. ಹಿಂದೆಯೂ ಇಂತಹ ರೋಗಗಳು ಬೇರೆ ಬೇರೆ ರೂಪಗಳಲ್ಲಿತ್ತು. ಇದರಲ್ಲೇನೂ ವಿಶೇಷತೆಯಿಲ್ಲ. ಆದರೆ ಸರಕಾರಗಳು ಹಾಗೂ ಖರೀದಿಸಲ್ಪಟ್ಟ ಕೆಲವೊಂದು ಮಾಧ್ಯಮಗಳು ಜನರನ್ನು ಹೆದರಿಸುತ್ತಿವೆ. ಸರಕಾರಗಳು ಈ ಬಗ್ಗೆ ವೈಜ್ಞಾನಿಕವಾದ ಮಾಹಿತಿ ನೀಡದೆ ತನ್ನ ಸ್ವಾರ್ಥ ಹಾಗೂ ರಾಜಕೀಯ ಹಿತಾಸಕ್ತಿಗೋಸ್ಕರ ಜನರನ್ನು ವಂಚಿಸುತ್ತಿದೆ. ಒಂದು ಕಡೆ ಕೋವಿಡ್ ಲಸಿಕೆಯನ್ನು ಜನರಿಗೆ ಖಡ್ಡಾಯ ಮಾಡುವುದಿಲ್ಲವೆಂದು ಕೇಂದ್ರ ಸರಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣ ಮಾಡಿದರೂ ಮತ್ತೊಂದು ಕಡೆ ಲಸಿಕೆ ಪಡೆಯದವರಿಗೆ ಮೂಲಭೂತ ವ್ಯವಸ್ಥೆಗಳನ್ನು ನಿರಾಕರಿಸುತ್ತಿದೆ. ಹೊಸ ರೂಪಾಂತರಿ ಒಮಿಕ್ರಾನ್ ಅಪಾಯವೆಂದು ಹೇಳುತ್ತಿರುವ ಸರಕಾರಗಳು ಇದಕ್ಕೆ ಸೂಕ್ತ ಮದ್ದು ಕಂಡುಹುಡುಕದೆ ಹಳೆಯ ಲಸಿಕೆಗಳನ್ನೇ ಕಡ್ಡಾಯವಾಗಿ ನೀಡುತ್ತಿದೆ. ಇದು ಲಸಿಕೆ, ಮಾಸ್ಕ್ ಮುಂತಾದ ಕೋವಿಡ್ ನಿರ್ಮೂಲನಾ ಪರಿಕರಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ಶರಣಾದ ಸರಕಾರಿ ಪ್ರತಿನಿಧಿಗಳ ಆಡಂಬೋಲವಾಗಿದೆ. ಚುನಾವಣಾ ನಿಧಿಗೋಸ್ಕರ ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿದು ಬಂಡವಾಳಶಾಹಿಗಳಿಗೆ ಲಾಭ ಮಾಡಿಸಿಕೊಡುವ ಸರಕಾರದ ಹುನ್ನಾರವಾಗಿದೆ.

ಸರಕಾರ ಕೂಡಲೇ ವಾರಂತ್ಯದ ಕರ್ಫ್ಯೂ ವನ್ನು ತೆಗೆದು ಕಾರ್ಮಿಕವರ್ಗ ಹಾಗೂ ಜನಸಾಮಾನ್ಯರು ಬದುಕುವ ಹಕ್ಕನ್ನು ಮನ್ನಿಸಬೆಕೆಂದು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಎಸ್. ಬೇರಿಂಜ ಸರಕಾರವನ್ನು ಎಚ್ಚರಿಸಿದ್ದಾರೆ.



Join Whatsapp