ರಾಯ್‌ಪುರ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಜಶ್ಪುರ್ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷ ಪವನ್ ಅಗರ್ವಾಲ್ ಅವರು ಕಾರ್ಮಿಕರ ಸಭೆಯಲ್ಲಿ ಮಾತನಾಡುತ್ತಿದ್ದಾಗ ಕೆಲವು ಕಾರ್ಯಕರ್ತರು ತಡೆಯಲು ಯತ್ನಿಸಿದ್ದಾರೆ. ಆದರೆ ಸಭೆಯಲ್ಲಿ ಕುಳಿತಿದ್ದ ಮತ್ತೊಂದು ಗುಂಪು ವೇದಿಕೆಗೆ ಜಿಗಿದು ಬಂದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ರಾಜ್ಯ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೊ ಅವರಿಗೆ ಭೂಪೇಶ್ ಬಾಘೇಲ್ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಪವನ್ ಅಗರ್ವಾಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕೆಲವು ಕಾರ್ಯಕರ್ತರು ಭಾಷಣವನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಮತ್ತು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಕಾಂಗ್ರೆಸ್ ಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಬಾಘೇಲ್ ಡಿಯೊಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕೆಂಬುದು ಪವನ್ ಅಗರ್ವಾಲ್ ವಾದ.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರೊಬ್ಬರು ಮಧ್ಯಪ್ರವೇಶಿಸಿ ಪವನ್ ಅಗರ್ವಾಲ್ ನಿಂದ ಮೈಕ್ ಕಸಿದುಕೊಂಡು ಅವರನ್ನು ಒಂದು ಕಡೆ ತಳ್ಳಿದ್ದಾರೆ. ಇದರೊಂದಿಗೆ ಕೆಲ ಕಾರ್ಯಕರ್ತರು ಗುಂಪು ಗುಂಪಾಗಿ ವೇದಿಕೆ ಮೇಲೆ ಹತ್ತಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.