ನವದೆಹಲಿ: ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರ ಮಾತುಗಳಿಗೆ ಇನ್ನಷ್ಟು ಅಡೆತಡೆ ಹಾಕಲು ಹೋಗುವುದಿಲ್ಲ. ಮಂತ್ರಿಗಳು, ಶಾಸಕರು, ಸಂಸದರು ಮೊದಲಾದವರು ಬೇರೆ ನಾಗರಿಕರಂತೆಯೇ ಸಂವಿಧಾನದ 19(1)ಎ ವಿಧಿಯಡಿ ಸಮಾನ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುವವರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್, ಎ. ಎಸ್. ಬೋಪಣ್ಣ, ಬಿ. ಆ. ಗವಾಯಿ, ವಿ. ರಾಮಸುಬ್ರಮಣ್ಯಂ ಮತ್ತು ಬಿ. ವಿ. ನಾಗರತ್ನ ಅವರುಗಳಿದ್ದ ಸುಪ್ರೀಂ ಕೋರ್ಟಿನ ಪೀಠವು ಸಂವಿಧಾನದ 19(2) ವಿಧಿಯಡಿ ಸಾರ್ವಜನಿಕರ ಮಾತುಗಳಿಗೆ ಮಿತಿ ಹೇರುವುದು ಸಾಧ್ಯವಿಲ್ಲ. ಅದು ಅವರ ಮಾತಿನ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ತೀರ್ಪು ನೀಡಿದೆ.
“ಸಂವಿಧಾನದ 19(2) ರಂತೆ ಸಂವಿಧಾನದ 19(1)ಎ ನೀಡಿದ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಲು ಸಾಧ್ಯವಿಲ್ಲ. ಮುಕ್ತ ಮಾತುಕತೆಗೆ 19(2)ರಂತೆ ತಡೆ ವಿಧಿಸಬಹುದೆನ್ನುವುದು ಸಮಗ್ರ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ವಿಧಿ 19(2)ರ ಅಡಿ 19(1)ಎ ವಿಧಿಯಡಿಯಲ್ಲಿ ಹೆಚ್ಚುವರಿ ಮಾತಿಗೆ ತಡೆ ಏನನ್ನೂ ವಿಧಿಸುವಂತೆ ಹೇಳಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಾರ್ವಜನಿಕ ವಲಯದಲ್ಲಿರುವವರ ಮಾತಿಗೆ ಮಿತಿ ಹಾಕಬೇಕು ಎಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಾರ್ವಜನಿಕರ ಒಳಿತಿಗಾಗಿ, ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಅಂತಹವರ ಮಾತುಗಳಿಗೆ ಹೆಚ್ಚಿನ ಮಿತಿ ಹೇರಬೇಕು ಎಂದು ಈ ಅರ್ಜಿಗಳು ವಾದಿಸಿದ್ದವು.
ಇನ್ನು ಒಬ್ಬ ಸಚಿವರು ಸರಕಾರದಡಿ ತನ್ನ ಕರ್ತವ್ಯಕ್ಕೆ ಸಂಬಂಧಿಸದಂತೆ ಹೇಳುವುದು ನೇರವಾಗಿ ಸರಕಾರದ ನೀತಿಗೆ ಸಂಬಂಧಿಸಿದ್ದಾಗುವುದಿಲ್ಲ ಎಂದು ಕೂಡ ಸುಪ್ರೀಂಕೋರ್ಟ್ ಹೇಳಿದೆ.
“ಒಬ್ಬ ಸಚಿವರ ಹೇಳಿಕೆಯು ನಾಗರಿಕರ ಹಕ್ಕುಗಳೊಂದಿಗೆ ನೇರವಾಗಿ ಹೆಣೆದುಕೊಂಡಿಲ್ಲ. ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದರೆ ಅದನ್ನು ಸಂವಿಧಾನದಡಿಯ ಹಿಂಸೆ ಅಥವಾ ಅಸಾಂವಿಧಾನಿಕ ಎಂದು ಅಷ್ಟನ್ನು ಮಾತ್ರ ನೀಡಲು ಅವಕಾಶವಿದೆ. ಅಂತಹ ಮಾತಿನವರು ಸಾರ್ವಜನಿಕ ಕ್ಷೇತ್ರದಲ್ಲಿರುವುದೇ ಸಾಂವಿಧಾನಿಕ ಹಿಂಸೆ ಎಂದು ಹೇಳಲು ಆಗುವುದಿಲ್ಲ.” ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಜಸ್ಟಿಸ್ ನಾಗರತ್ನ ಅವರು ತೀರ್ಪಿನಲ್ಲಿ ಪ್ರತ್ಯೇಕವಾಗಿ ಹೇಳಿದ್ದೇನೆಂದರೆ ಮಾತಿನ ಮತ್ತು ಅಭಿಪ್ರಾಯ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಅತ್ಯವಶ್ಯಕ ಹಕ್ಕು ಆಗಿದೆ. ಆಡಳಿತ ಮುಂತಾದವುಗಳ ಬಗ್ಗೆ ಅವರು ಸರಿಯಾಗಿ ಅರಿತಿರಬೇಕು, ಮಾತು ದ್ವೇಷದ ಭಾಷಣ ಆಗಬಾರದು ಎಂದರು.
“ದ್ವೇಷ ಭಾಷಣವು ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಭಾರತದಂತಹ ದೇಶದಲ್ಲಿ ಅದು ನಾಗರಿಕರನ್ನು ನಾನಾ ಬಗೆಯ ದಾಳಿಯಲ್ಲಿ ಸಿಲುಕಿಸುತ್ತದೆ. ಯಾವುದೇ ಧರ್ಮ, ಜಾತಿ ಇತ್ಯಾದಿ ನೋಡದೆ ಪ್ರತಿಯೊಬ್ಬರ ಘನತೆಗೆ ಧಕ್ಕೆ ಬಾರದಂತೆ, ಮಹಿಳೆಯರ ಗಣ್ಯತೆ ಕಾಪಾಡಲ್ಪಡುವಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಅವರು ಹೇಳಿದರು.
2016ರಲ್ಲಿ ಉತ್ತರ ಪ್ರದೇಶದಲ್ಲಿ ಓರ್ವ ಅಪ್ರಾಪ್ತೆ ಮತ್ತು ಆಕೆಯ ತಾಯಿಯ ಗುಂಪು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿಕೆಯ ಮೇಲೆ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠವು ಈ ವಿಷಯ ಎತ್ತಿಕೊಂಡು ತೀರ್ಪು ನೀಡಿದೆ.