ಹೊಸದಿಲ್ಲಿ : ತನ್ನನ್ನು ಮೌನವಾಗಿಸಬಹುದೆಂದು ಭಾವಿಸಬೇಡಿ, ತಾನು ರೈತರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ಅವರು ಟ್ವೀಟ್ ಮಾಡಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದ ‘ವಿದೇಶಿ’ ಟ್ವೀಟ್‌ಗಳಿಗೆ ಭಾರತದಲ್ಲಿ ಉಂಟಾದ ವಿವಾದಗಳಿಗೆ ಸಂಬಂಧಿಸಿ ಮೀನಾ ಹ್ಯಾರಿಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ಬೆದರಿಸುವಂತಿಲ್ಲ. ಮೌನವಾಗಿಸಲೂ ಕೂಡ ‘ಎಂದು ಅವರು ಟ್ವೀಟ್ ಮಾಡಿದ್ದಾರೆ. ರೈತರ ಶಾಂತಿಯುತ ಪ್ರತಿಭಟನೆಯ ಜೊತೆ ತಾನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬರಹಗಾರರೂ ಆಗಿರುವ ಮೀನಾ ಈ ವಿಷಯಕ್ಕೆ ಸಂಬಂಧಿಸಿ ಮಾತನಾಡುವುದು ಇದು ಎರಡನೇ ಬಾರಿಯಾಗಿದೆ. ‘ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ಮೇಲೆ ಒಂದು ತಿಂಗಳ ಹಿಂದೆ ದಾಳಿ ನಡೆಸಲಾಗಿತ್ತು. ಅದರ ವಿರುದ್ಧ ನಾವು ಮಾತನಾಡಿದ್ದೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಈಗ ದಾಳಿಗೊಳಪಟ್ಟಿದೆ. ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧದ ದೌರ್ಜನ್ಯಗಳು ಅನ್ಯಾಯ’ ಎಂದಾಗಿತ್ತು ಮೀನಾ ಹ್ಯಾರಿಸ್ ಅವರ ಮೊದಲ ಟ್ವೀಟ್. ಈ ಟ್ವೀಟ್‌ಗಳನ್ನು ಕೇಂದ್ರ ಸರಕಾರ ವಿರೋಧಿಸಿತ್ತು.
ಸಚಿನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದರ ವಿರುದ್ಧ ಪ್ರತಿಕ್ರಿಯಿಸಿದ್ದರು. ಆಂತರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂದು ಭಾರತಕ್ಕೆ ತಿಳಿದಿದೆ ಎಂದಾಗಿತ್ತು ಅವರ ಟ್ವೀಟ್‌ಗಳು.