ಕೇಪ್‌ಟೌನ್ | ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಇದು ಆಸೀಸ್‌ಗೆ ಸತತ ಮೂರನೇ ಪ್ರಶಸ್ತಿಯಾಗಿದ್ದು, ಒಟ್ಟು ಆರು ಬಾರಿ ಚಾಂಪಿಯನ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 19 ರನ್‌ಗಳಿಂದ ಸೋಲಿಸುವ ಮೂಲಕ ಕಾಂಗರೂ ಪಡೆ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡಕ್ಕೆ 6 ವಿಕೆಟ್ ಗೆ 137 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಆರಂಭಿಕ ಆಟಗಾರ್ತಿ ಬೆತ್ ಮೂನಿ ಅರ್ಧಶತಕ ಬಾರಿಸುವ ಮೂಲಕ ಆಸ್ಟ್ರೇಲಿಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಮೂನಿ ಕೇವಲ 53 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿದರು.
ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ್ತಿ ಲಾರಾ ವೊಲ್ವರ್ತ್ (48 ಎಸೆತಗಳಲ್ಲಿ 61) ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತರಲು ಪ್ರಯತ್ನಪಟ್ಟರೂ ಅವರಿಗೆ ಬೆಂಬಲವಾಗಿ ನಿಲ್ಲುವವರು ಯಾರೂ ಇರಲಿಲ್ಲ.
ಲಾರಾ ಹೊರತುಪಡಿಸಿ, ಕ್ಲೋಯ್ ಟ್ರಿಯಾನ್ (25), ಟಾಸ್ಮಿನ್ ಬ್ರಿಟ್ಸ್ (10) ಮತ್ತು ಮಾರಿಸನ್ ಕಾಪ್ (11) ಮಾತ್ರ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಲಯದಲ್ಲಿ ಎರಡಂಕಿ ಅಂಕಗಳನ್ನು ಪಡೆದವರು.
ಮೂನಿ ಹೊರತುಪಡಿಸಿ ಆಶ್ಲೇ ಗಾರ್ಡ್ನರ್ (21 ಎಸೆತಗಳಲ್ಲಿ 29) ಮತ್ತು ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (20 ಎಸೆತಗಳಲ್ಲಿ 18) ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದವರು.
ದಕ್ಷಿಣ ಆಫ್ರಿಕಾ ಪರ ಮಾರಿಸನ್ ಕಾಪ್ ಮತ್ತು ಶಬ್ನಿಮ್ ಇಸ್ಮಾಯಿಲ್ ತಲಾ ಎರಡು ವಿಕೆಟ್ ಪಡೆದರು.
ಆಲ್‌ರೌಂಡರ್ ಪ್ರದರ್ಶನ ನೀಡಿದ ಆಸ್ಟ್ರೇಲಿಯದವರೇ ಆದ ಆಶ್ಲೇ ಗಾರ್ಡ್ನರ್ ಟೂರ್ನಿಯಲ್ಲಿ 110 ರನ್ ಭಾರಿಸಿ, ಹತ್ತು ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.