ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಧ್ಯಕ್ಷೆ ಪುಷ್ಪಾ ಅಮರನಾಥ್ ವಿರುದ್ಧ ತಿರುಗಿ ಬಿದ್ದಿರುವ ಸದಸ್ಯರು, ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ 50ಕ್ಕೂ ಮಹಿಳಾ ಕಾಂಗ್ರೆಸ್ ಸದಸ್ಯರು, ಪುಷ್ಪಾ ಅಮರನಾಥ್ ವಿರುದ್ಧ ಪೋಸ್ಟರ್ ಹಿಡಿದು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೆಲವು ದಿನಗಳ ಹಿಂದೆ ಪುಷ್ಪಾ ಅಮರನಾಥ್ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತಿಗೆ ಸಹ ಮನ್ನಣೆ ನೀಡಿಲ್ಲ. ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಸಹ ಈ ಕುರಿತು ಪುಷ್ಪಾ ಅಮರನಾಥ್‌ಗೆ ಕರೆ ಮಾಡಿ ಸೂಚನೆ ನೀಡಿದ್ದರು. ಆದರೆ ಯಾವ ನಾಯಕರ ಸೂಚನೆಗೂ ಮನ್ನಣೆ ನೀಡದೆ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪುಷ್ಪಾ ಅಮರನಾಥ್ ಕರ್ನಾಟಕ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೂರು ವರ್ಷ ಕಳೆದಿದೆ. ಅವರ ಅಧಿಕಾರಾವಧಿ ಫೆಬ್ರವರಿಯಲ್ಲಿಯೇ ಕೊನೆಗೊಂಡಿದೆ. ಆದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಪ್ರಾಮಾಣಿಕರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ವಿಚಾರಕ್ಕೆ ಸಂಬಂಧಿಸಿ ಕೂಡಲೇ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.