ಕರ್ನಾಟಕದಲ್ಲಿ ಬಾಲಕಿಯರು-ಮಹಿಳೆಯರು ನಾಪತ್ತೆ ಪ್ರಕರಣ: ಸಮಗ್ರ ತನಿಖೆಗೆ WIM ಆಗ್ರಹ

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಬಾಲಕಿಯರು-ಮಹಿಳೆಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ವಿಮೆನ್ ಇಂಡಿಯಾ ಮೂವ್ಮೇಂಟ್ ಕರ್ನಾಟಕ ಸರಕಾರವನ್ನು ಆಗ್ರಹಿಸಿದೆ.

- Advertisement -

ವಿಮೆನ್ ಇಂಡಿಯಾ ಮೂವ್ಮೇಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಅವರ ಅಧ್ಯಕ್ಷತೆಯಲ್ಲಿ  ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿಮ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಬಹಳಷ್ಟು ಸಮಸ್ಯೆಗಳತ್ತ ರಾಜ್ಯ ಸರಕಾರ ಗಮನ ಕೊಡಬೇಕೆಂದು ಒತ್ತಾಯಿಸಲಾಯಿತು.

2023 ಜುಲೈ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ  ಕೇಂದ್ರ ಗ್ರಹ ಸಚಿವಾಲಯ ಮಂಡಿಸಿದ ಅಂಕಿ ಅಂಶಗಳು ದಿಗ್ಭ್ರಮೆಗೊಳಿಸುವಂಥದ್ದು. ಇದರ ಪ್ರಕಾರ 2019-2021ರ ವರೆಗಿನ ಮೂರು ವರ್ಷದ ಅವಧಿಯಲ್ಲಿ 13ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ 31,935 ಮಹಿಳೆಯರು ಹಾಗೂ ಬಾಲಕಿಯರು ಕರ್ನಾಟಕದಿಂದ ನಾಪತ್ತೆಯಾಗಿದ್ದಾರೆಂದು ವರದಿಯು ತಿಳಿಸುತ್ತದೆ.  ಮಹಿಳಾ ಪರ ಸರ್ಕಾರ ಎಂಬಂತೆ ಬಿಂಬಿಸಿ ಕೊಳ್ಳುತ್ತಿರುವ ಕರ್ನಾಟಕ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವುದು ಅಕ್ಷಮ್ಯ. ಆದ್ದರಿಂದ ಸರ್ಕಾರ ಆದ್ಯತೆಯ ಮೇರೆಗೆ ವಿಶೇಷ ತನಿಖಾ ತಂಡದ ಮುಖಾಂತರ ಸಮಗ್ರ ತನಿಖೆ ನಡೆಸಬೇಕು  ಹಾಗೂ ಮಹಿಳಾ ಭದ್ರತೆಯ ಬಗ್ಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೇಂಟ್ ಕರ್ನಾಟಕ ರಾಜ್ಯ ಸಮಿತಿ ನಡೆಸಿದ ಸಭೆಯಲ್ಲಿ ಒತ್ತಾಯಿಸಲಾಯಿತು.

- Advertisement -

ರಾಜ್ಯದ ಬಹಳಷ್ಟು ಸಮಸ್ಯೆಗಳತ್ತ ರಾಜ್ಯ ಸರಕಾರ ಗಮನ ಕೊಡಬೇಕೆಂದೂ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ವರ್ಗಗಳ ಪರ ಅಭಿವೃದ್ಧಿ ವಿಷಯದಲ್ಲಿ ಹಾಗೂ ಅವರ ಮೇಲಾಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನಾರ್ಹ. ಹಿಜಾಬ್,  2ಬಿ ಮೀಸಲಾತಿ ಮರು ಸ್ಥಾಪಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ತಾಳಿದೆ. ಬಜೆಟ್ ನಲ್ಲೂ ಅಲ್ಪಸಂಖ್ಯಾತರನ್ನು ಕಡೆಗೆಣಿಸಿರುವುದು ಗಮನಾರ್ಹ. ಇಂತಹ ನಿರ್ಲಕ್ಷತನವನ್ನು ಕೈ ಬಿಟ್ಟು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸ ಬೇಕೆಂದು ಸಭೆಯು ಆಗ್ರಹಿಸಿದೆ.

 ಮಾತ್ರವಲ್ಲ ಯುವಶಕ್ತಿಯು ದೇಶವೊಂದರ ಭವಿಷ್ಯ ನಿರ್ಮಾಣದ ರೂವಾರಿಗಳಾಗಿದ್ದಾರೆ. “ದೇಶದ ನಾಶಕ್ಕೆ ರಕ್ತ ರಹಿತ ಯುದ್ಧ” ಎಂಬ ಮಾತಿನಂತೆ ಮಾದಕ ದ್ರವ್ಯದ ವ್ಯಾಪಕತೆಯು ದೇಶವನ್ನು ನಾಶಗೊಳಿಸುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಕೈಗೆಟ್ಟಕುತ್ತಿರುವ ಮಾದಕ ಪದಾರ್ಥಗಳು ಯುವ ಸಮೂಹವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ರಾಜ್ಯದಲ್ಲಿ ಮಾದಕ ವ್ಯಸನಿಗಳ ಬಂಧನವಾಗುತ್ತಿದೆಯೇ ಹೊರತು ಅದರ ಮೂಲವನ್ನು ಪತ್ತೆ ಹಚ್ಚುತ್ತಿಲ್ಲ. ಜೊತೆಗೆ ರಾಜಕೀಯ ಪ್ರಭಾವದಿಂದಾಗಿ ಆರೋಪಿಗಳು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರವು ಬೆನ್ನೆಲುಬಾಗಿ ನಿಂತಿರುವುದು ವಿಷಾದನೀಯ. ಸರಕಾರ ಮಾದಕ ದ್ರವ್ಯದ ಜಾಲದ ಮೂಲವನ್ನು ಪತ್ತೆ ಹಚ್ಚಿ ನಿರ್ಮೂಲನೆ ಗೊಳಿಸಿ ಸ್ವಸ್ಥ ಸಮಾಜವನ್ನು ನಿರ್ಮಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೇಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸಭೆಯಲ್ಲಿ  ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್ ಮಹಿಳಾ ಸಂಘಟನೆ ಅನಿವಾರ್ಯತೆಯ ಬಗ್ಗೆ ಮಾತಾಡಿದರು, ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿದ ಈ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆಯರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷೆ-ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Join Whatsapp