ಮಹಿಳೆಯರ ಭದ್ರತೆ ಬಗ್ಗೆ ಖಾತರಿಪಡಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯ

Prasthutha|

ಮಂಗಳೂರು: ಮಹಿಳೆಯರ ಭದ್ರತೆ ಬಗ್ಗೆ ಖಾತರಿಪಡಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಕಾರ್ಯಕಾರಿ ಸಮಿತಿ ಆಗ್ರಹಿಸಿದೆ.

- Advertisement -

ಸಭೆಯ ನಿರ್ಣಯಗಳನ್ನು ಕರ್ನಾಟಕ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಬಿಡುಗಡೆ ಮಾಡಿದ್ದಾರೆ.

ಮಹಿಳಾ ಭದ್ರತೆ ರಾಜ್ಯದಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ಎನ್ ಎಫ್ ಎಚ್ ಎಸ್ ವರದಿ ಪ್ರಕಾರ ಕರ್ನಾಟಕದಲ್ಲಿ ಅತ್ಯಧಿಕ ಗೃಹ ಹಿಂಸೆ ನಡೆಯುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಅಪಹರಣ ದೌರ್ಜನ್ಯ, ಅತ್ಯಾಚಾರ ,ಇತ್ಯಾದಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅತ್ಯಾಚಾರವನ್ನು ಜನಾಂಗೀಯ ಅಸ್ತ್ರವಾಗಿ ಬಳಸುವ ಕರೆ ನೀಡಲಾಗುತ್ತಿದೆ. ಇದನ್ನು ಕಂಡು ಸರ್ಕಾರ, ವ್ಯವಸ್ಥೆ, ನಾಗರಿಕರು ಹೆಚ್ಚೇಕೆ ಮಹಿಳೆಯರು ಕೂಡ ತೆಪ್ಪಗಿರುವುದು ಆತಂಕಕಾರಿ. ಆದ್ದರಿಂದ ಮಹಿಳಾ ಭದ್ರತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ  ಮಹಿಳಾ ಭದ್ರತೆಯನ್ನು ಖಾತ್ರಿಪಡಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.

- Advertisement -

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮುಖ್ಯಮಂತ್ರಿಗಳ ‘ಕ್ರಿಯೆಗೆ ಪ್ರತಿಕ್ರಿಯೆ ‘ಎಂಬ ಹೇಳಿಕೆಯು ಇದಕ್ಕೆ ಕಾರಣವಾಗಿದೆ. ಜೊತೆಗೆ ಜನಪ್ರತಿನಿಧಿಗಳ ಮತ್ತು ಸಂಘ ಪರಿವಾರದ ನಾಯಕರ ದ್ವೇಷ ಭಾಷಣಗಳು, ಶಸ್ತ್ರಾಸ್ತ್ರ ತರಬೇತಿ – ವಿತರಣೆ, ಕ್ರಿಮಿನಲ್ ಕೇಸುಗಳನ್ನೂ ವಾಪಸ್ ಪಡೆಯುವುದು ಇತ್ಯಾದಿ ಕಾರಣಗಳಿಂದ ಸರಣಿ ರಾಜಕೀಯ ಕೊಲೆಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಪರಿಹಾರ ವಿತರಿಸುವಲ್ಲಿ ಮತ್ತು ಪ್ರಕರಣಗಳನ್ನು ತನಿಖಾ ಸಂಸ್ಥೆಗಳಿಗೆ ವಹಿಸುವಲ್ಲಿ ಮುಖ್ಯಮಂತ್ರಿ ತೋರಿದ ಪಕ್ಷಪಾತಿ ಧೋರಣೆಯು ಅಸಂವಿಧಾನಿಕವಾಗಿದೆ ಮತ್ತು ಸಂಘ ಪರಿವಾರವನ್ನು ಮೆಚ್ಚಿಸುವ ತಂತ್ರವಾಗಿದೆ. ತಕ್ಷಣ ಸರಕಾರ ತನ್ನ ಸ್ವಾರ್ಥವನ್ನು ಬದಿಗಿರಿಸಿ ರಾಜ ಧರ್ಮವನ್ನು ಪಾಲಿಸಬೇಕೆಂದು ಸಭೆಯು ಒತ್ತಾಯಿಸಿದೆ.

ಆಹಾರ ವಸ್ತುಗಳು ಮತ್ತು ಶೈಕ್ಷಣಿಕ ಸಾಧನಗಳ ಮೇಲೆ ವಿಧಿಸಿರುವ ಅವೈಜ್ಞಾನಿಕ ಜಿಎಸ್ ಟಿ ಮಹಿಳಾ ವಿರೋಧಿಯಾಗಿದೆ. ಪೆಟ್ರೋಲ್ ಡೀಸೆಲ್ ಅಡುಗೆ ಅನಿಲಗಳ ಮೇಲೆ ನಿರಂತರ ಅನಿಯಂತ್ರಿತವಾಗಿ ಬೆಲೆ ಏರುತ್ತಲೇ ಇದೆ. ಇತ್ತೀಚೆಗೆ ಒಂದೇ ದಿನ ರೂ.50 ಏರಿಸಲಾಗಿದೆ. ಜೊತೆಗೆ ಆಶ್ವಾಸನೆಗೂ ವಿರುದ್ಧವಾಗಿ ಆಹಾರ ವಸ್ತುಗಳಿಗೂ ಜಿಎಸ್ ಟಿ ವಿಧಿಸಿರುವ ಒಕ್ಕೂಟ ಸರಕಾರದ ನಡೆಯು ಅಕ್ಷಮ್ಯ. ಶೈಕ್ಷಣಿಕ ಸಾಮಗ್ರಿಗಳ ಮೇಲೆ ವಿಧಿಸಿರುವ ಜಿಎಸ್ ಟಿಯಿಂದಾಗಿ ಅಹಿಂದ ವರ್ಗದ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿ ಶೈಕ್ಷಣಿಕ ಹಿನ್ನಡೆಯಾಗುವುದು ಖಚಿತ. ಆದ್ದರಿಂದ ಸರಕಾರ ಆಹಾರ ವಸ್ತುಗಳು ಮತ್ತು ಶೈಕ್ಷಣಿಕ ಪರಿಕರಕಗಳ ಮೇಲಿನ ಜಿಎಸ್ ಟಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಸಭೆಯು ಒತ್ತಾಯಿಸಿದೆ.

 ರಾಜ್ಯ ಸರ್ಕಾರವು ದಲಿತ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿ ವೇತನದಲ್ಲಿ ಕಡಿತ ಮಾಡಿರುವ ಕ್ರಮವನ್ನು ಸಭೆಯು ಖಂಡಿಸುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರ ಮೇಲೆ ಶೈಕ್ಷಣಿಕ ಒತ್ತಡ ಬೀಳುವುದರಿಂದ ಶಿಕ್ಷಣ ಬಡವರಿಗೆ ಗಗನ ಕುಸುಮವಾಗಲಿದೆ. 2019-20 ಸಮೀಕ್ಷೆಯ ಪ್ರಕಾರ ಕಡ್ಡಾಯ ಪ್ರಾಥಮಿಕ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಇಳಿಕೆ ಕಂಡು ಬಂದಿದೆ. ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಸರಕಾರ ವಿಫಲವಾಗಿದೆ ಎಂಬ ನೆಪವೊಡ್ಡಿ ದಲಿತ ಬಾಲಕಿಯರ ಹೈಸ್ಕೂಲ್ ಶಿಕ್ಷಣವನ್ನು ಉತ್ತೇಜಿಸುವ ಎನ್ ಎಸ್ ಐ ಜಿ ಯಸ್ ಇ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಸಮವಸ್ತ್ರದ ನೆಪವೊಡ್ಡಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರದಬ್ಬಲಾಗಿದೆ. ಸರಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚುವ ಮುಖಾಂತರ ಗ್ರಾಮೀಣ ಪ್ರದೇಶದ ಮಕ್ಕಳ ವಿಶೇಷತಃ ಹೆಣ್ಮಕ್ಕಳ ಶೈಕ್ಷಣಿಕ ಭವಿಷ್ಯ ಕರಾಳವಾಗಲಿದೆ. ಆದ್ದರಿಂದ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಪ್ರಮಾಣದ ವಿದ್ಯಾರ್ಥಿವೇತನಗಳನ್ನು ತಕ್ಷಣ ಜಾರಿಗೊಳಿಸಬೇಕು ಜೊತೆಗೆ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಬಾಲಕಿಯರ ಶೈಕ್ಷಣಿಕ ಪ್ರಗತಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದು ಸಭೆಯು ಒತ್ತಾಯಿಸಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸುವ ಪೌಷ್ಟಿಕ ಆಹಾರದಲ್ಲಿ ಕಡಿತಗೊಳಿಸಿರುವ ಸರಕಾರದ ಕ್ರಮವನ್ನು ಸಭೆಯು ಖಂಡಿಸುತ್ತದೆ.  ಮಗುವಿನ 40 ಶೇಕಡಾ ದೈಹಿಕ ಹಾಗೂ 80 ಶೇಕಡ ಮಾನಸಿಕ ಬೆಳವಣಿಗೆ ಆರು ವರ್ಷದಲ್ಲಿನ ಸಮಯದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮಗುವಿಗೆ ಬೇಕಾದ ಪೂರಕ ಪೌಷ್ಟಿಕ ಆಹಾರ ಮತ್ತು ಪ್ರಾಥಮಿಕ ಆರೋಗ್ಯ ಸೌಲಭ್ಯಗಳಲ್ಲಿ ಕಡಿತಗೊಳಿಸಿದರೆ ಶಿಶು ಮರಣ ಪ್ರಮಾಣ ಹೆಚ್ಚುವುದರಲ್ಲಿ ಸಂಶಯವಿಲ್ಲ. ಗರ್ಭಿಣಿ ಮಹಿಳೆಯರ ಅಪೌಷ್ಟಿಕತೆಯು ಶಿಶು ಮರಣದ ಮೇಲೆ ನೇರ ಪರಿಣಾಮ ಬೀರುತ್ತದೆ.ಆದ್ದರಿಂದ ಪೂರ್ಣ ಪ್ರಮಾಣದ ಪೌಷ್ಟಿಕ ಆಹಾರವನ್ನು ಸರಕಾರವು ಅಂಗನವಾಡಿಗಳ ಮುಖಾಂತರ ಒದಗಿಸಬೇಕೆಂದು ಸಭೆಯು ಒತ್ತಾಯಿಸಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp