ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣುಮಕ್ಕಳಿಗೆ ಪಿನಾಯಿಲ್ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೆಳಗಾವಿಯ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾರೆ. ತನ್ನ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ಅವರಿಗೂ ಸರಸ್ವತಿ ಪಿನಾಯಿಲ್ ಕುಡಿಸಿದ್ದರಿಂದ ನಾಲ್ವರೂ ಅಸ್ವಸ್ಥಗೊಂಡಿದ್ದಾರೆ.
ಸಾಲದಿಂದ ಕಂಗೆಟ್ಟು ಹೋಗಿರುವ ಸರಸ್ವತಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಅದೃಶ್ಯಪ್ಪ ಸಾಕಷ್ಟು ಜನರ ಕಡೆ ಸಾಲ ಮಾಡಿದ್ದಾರೆ. ಸಾಲಗಾರರ ಕಿರುಕುಳ ಹೆಚ್ಚಾಗಿದ್ದರಿಂದ ಕಳೆದ 15 ದಿನಗಳ ಹಿಂದೆ ಪತ್ನಿ, ಮಕ್ಕಳನ್ನು ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಇತ್ತ, ಸಾಲಗಾರರು ಪ್ರತಿದಿನವೂ ಸರಸ್ವತಿ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೆಡೆ ಸಾಲಗಾರರ ಕಿರುಕುಳ, ಇನ್ನೊಂದೆಡೆ ಮಕ್ಕಳಿಗೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಸ್ಥಿತಿ. ಇದರಿಂದ ಬೇಸರಗೊಂಡ ಸರಸ್ವತಿ ಅವರು ಜೀವನ ನಿರ್ವಹಣೆಗೆ ಸಹಾಯ ಕೋರಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.
ಕಚೇರಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇರಲಿಲ್ಲ. ಕೆಲಹೊತ್ತು ಕಾಯುವಂತೆ ಕಚೇರಿ ಸಿಬ್ಬಂದಿ ಹೇಳಿದರು. ಮಹಿಳೆ ಕಾದು ಕುಳಿತ ವೇಳೆ ಮಕ್ಕಳು ಅಸ್ವಸ್ಥಗೊಂಡು, ವಾಂತಿ ಮಾಡತೊಡಗಿದರು. ಕಚೇರಿ ಸಿಬ್ಬಂದಿ ಮಕ್ಕಳಿಗೆ ನೀರು ಕೊಟ್ಟು ಉಪಚರಿಸಲು ಮುಂದಾದರು. ’ನಮ್ಮ ತಾಯಿ ಜ್ಯೂಸ್ ಎಂದು ಏನನ್ನೋ ಕುಡಿಸಿದ್ದಾಳೆ’ ಎಂದು ಹಿರಿಯ ಪುತ್ರಿ ಸೃಷ್ಟಿ ಸಿಬ್ಬಂದಿಗೆ ತಿಳಿಸಿದಳು. ಅಗ ಎಚ್ಚೆತ್ತುಕೊಂಡ ಸಿಬ್ಬಂದಿ ಪರಿಶೀಲಿಸಿದಾಗ ಎಲ್ಲರೂ ಪಿನಾಯಿಲ್ ಕುಡಿದಿದ್ದು ಗಮನಕ್ಕೆ ಬಂತು. ತಕ್ಷಣ ಅವರನ್ನು ಹತ್ತಿರದಲ್ಲೇ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.