ಚಿಕ್ಕಮಗಳೂರು: ರೋಗಿಯನ್ನು ನೋಡಲೆಂದು ಬಂದಿದ್ದ ವೇಳೆ ವೈದ್ಯರು ಅವಾಚ್ಯವಾಗಿ ನಿಂದಿಸಿದ ಕಾರಣಕ್ಕೆ ಆಕ್ರೋಶಗೊಂಡ ಮಹಿಳೆಯರು, ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಮೂಳೆ ತಜ್ಞರಾಗಿರುವ ಡಾ. ವೆಂಕಟೇಶ್ ಎಂಬುವವರ ಮೇಲೆ ಆಸ್ಪತ್ರೆಯಲ್ಲೇ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ. ವೈದ್ಯರ ಕೊರಳ ಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೂಡಲೇ ಹೊರರೋಗಿ ವಿಭಾಗ ಬಂದ್ ಮಾಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಎದುರು ಜಮಾಯಿಸಿದರು.
ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲಿಯ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಚಿಕ್ಕಮಗಳೂರು ನಗರ ಡಿವೈಎಸ್ಪಿ ಹಾಗೂ ಎಸ್ಐ ಭೇಟಿ ನೀಡಿದ್ದು, ಪ್ರತಿಭಟನಾ ನಿರತ ವೈದ್ಯರನ್ನು ಸಮಾಧಾನಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಗಲಾಟೆಯೊಂದರಲ್ಲಿ ಗಾಯವಾಗಿಇರ್ಷಾದ್ ಎಂಬುವವರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಈ ವೇಳೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೂಳೆ ತಜ್ಞರಾಗಿರುವ ಡಾ. ವೆಂಕಟೇಶ್ ಅವರು ಚಿಕಿತ್ಸೆ ನೀಡುತ್ತಿದ್ದರು. ರೋಗಿಯ ತಪಾಸಣೆ ನಡೆಸುವಾಗ ಆತನ ಕುಟುಂಬಸ್ಥರು ಕೊಠಡಿಗೆ ತೆರಳಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಕೊಠಡಿಯಿಂದ ಹೊರಹೋಗುವಂತೆ ಸೂಚಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಾತಿನ ರಭಸದಲ್ಲಿ ವೈದ್ಯರು ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿರುವ ಆರೋಪ ಕೇಳಿಬಂದಿದೆ. ಮಾತಿನ ಭರದಲ್ಲಿ ‘ಈ ರೀತಿ ನುಗ್ಗಲು ಇದು ಸೂಳೆಗಳ ಮನೆಯಲ್ಲ’ ಎಂದು ವೈದ್ಯ ಹೇಳಿರುವುದಾಗಿ ಹಲ್ಲೆ ನಡೆಸಿರುವ ಮಹಿಳೆಯರು ಆರೋಪಿಸಿದ್ದಾರೆ.
ವೈದ್ಯರ ಅವಾಚ್ಯ ಹೇಳಿಕೆಯಿಂದ ಆಕ್ರೋಶಗೊಂಡ ರೋಗಿಯ ಕುಟುಂಬದ ಮಹಿಳೆ ತಸ್ಲೀಮಾ ಎಂಬುವವರು ವೈದ್ಯ ಡಾ. ವೆಂಕಟೇಶ್ ಅವರ ಕೊರಳ ಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯವು ಮೊಬೈಲ್ನ ಲ್ಲಿ ಸೆರೆಯಾಗಿದೆ. ಕೂಡಲೇ ಹೊರರೋಗಿ ಬಂದ್ ಮಾಡಿ, ಉಳಿದ ವೈದ್ಯರು ಪ್ರತಿಭಟನೆ ನಡೆಸಿದರು.
ಘಟನೆಯ ಸಂಬಂಧ ವೈದ್ಯರು ಈಗಾಗಲೇ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೈದ್ಯರ ವಿರುದ್ಧವೂ ಕೂಡ ದೂರು ನೀಡುವುದಾಗಿ ಹಲ್ಲೆ ನಡೆಸಿರುವ ಮಹಿಳೆಯರು ತಿಳಿಸಿದ್ದಾರೆ.