ಹಾಸನ: ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಾಗದೇ ಇದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಂಜಿತಾ(31) ಎಂದು ಗುರುತಿಸಲಾಗಿದೆ.
10 ವರ್ಷಗಳ ಹಿಂದೆ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಗ್ರಾಮದ ರಂಜಿತಾ ಮತ್ತು ವಿದ್ಯಾನಗರ ನಿವಾಸಿ ಅಕ್ಷಯ್ ಎಂಬುವರ ನಡುವೆ ಮದುವೆಯಾಗಿತ್ತು. ಎರಡೂ ಮನೆಯವರು ಪರಸ್ಪರ ಒಪ್ಪಿ ಮದುವೆ ಮಾಡಿದ್ದರು. ರಂಜಿತಾ ಹಾಸನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮದುವೆಯಾಗಿ ದಶಕ ಕಳೆದಿದ್ದರೂ, ರಂಜಿತಾ ದಂಪತಿಗೆ ಮಕ್ಕಲಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಅಕ್ಷಯ್ ಕುಟುಂಬ ಸದಸ್ಯರು ರಂಜಿತಾಗೆ ಚಿತ್ರ ಹಿಂಸೆ ಕೊಡುತ್ತಿದ್ದರು ಅಲ್ಲದೆ ನಿನ್ನನ್ನು ಸೊಸೆಯಾಗಿ ತಂದು ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದೆಲ್ಲಾ ಮೂದಲಿಸುತ್ತಿದ್ದರು ಎನ್ನಲಾಗಿದೆ. ಇದರ ನಡುವೆ ಹೆಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಅಕ್ಷಯ್ ತಂದೆ ಅಶೋಕ್ ರಂಜಿತಾಗೆ ತೊಂದರೆ ಕೊಡುತ್ತಿದ್ದರು. ಕಡೆಗೆ ಗಂಡ, ಮಾವ ಸೇರಿ ಕೊಲೆ ಮಾಡಿ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಹೆಣ ಇರಿಸಿದ್ದಾರೆಂದು ರಂಜಿತಾ ಪೋಷಕರು ಆರೋಪಿಸಿದ್ದಾರೆ.
ಪಂಚಾಯ್ತಿಯೂ ನಡೆದಿತ್ತು:
ಇದೇ ಕಾರಣಕ್ಕೆ ಈ ಹಿಂದೆ ಹಲವು ರಂಜಿತಾ ಜೊತೆಗೆ ಜಗಳ ತೆಗೆದು ಕೈ ಮಾಡಿದ್ದಲ್ಲದೆ, ಕೊಡ ಬಾರದ ತೊಂದರೆ ಕೊಟ್ಟಿದ್ದರು. ಈ ಬಗ್ಗೆ ರಂಜಿತಾ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಅದಾದ ಬಳಿಕ ರಾಜೀ ಪಂಚಾಯ್ತಿ ನಡೆದಿತ್ತು. ಆದರೂ ಸಂಸಾರ ಸಂಬAಧ ಸರಿಹೋಗಿರಲಿಲ್ಲ. ಇದೀಗ ರಂಜಿತಾ ಶಂಕಾಸ್ಪದ ರೀತಿಯಲ್ಲಿ ಶವವಾಗಿರುವುದು ಸೋಮವಾರ ಬೆಳಗ್ಗೆ ಬಯಲಾಗಿದೆ.
ಸಂಬಂಧಿಕರ ಆಕ್ರೋಶ:
ಗಂಡನ ಮನೆಯವರೇ ರಂಜಿತಾಳನ್ನು ಹತ್ಯೆಮಾಡಿ ನಂತರ ನೇಣುಹಾಕಿದ್ದಾರೆ ಎಂದು ಮೃತೆ ಸಂಬAಧಿಕರ ಆರೋಪ ಮಾಡಿದ್ದಾರೆ. ರೊಚ್ಚಿಗೆದ್ದ ಕೆಲವರು, ಅಕ್ಷಯ್ ಮನೆ ಎದುರು ಹೂ ಕುಂಡಗಳನ್ನು ಚೆಲ್ಲಪಿಲ್ಲಿ ಮಾಡಿ ತಮ್ಮ ಸಿಟ್ಟು ಹೊರ ಹಾಕಿದರು. ಎರಡು ಕುಟುಂಬಗಳ ನಡುವೆ ಮಾರಾಮಾರಿ ಸಹ ನಡೆದು ಒಂದು ಗುಂಪು ಕೆಲವರ ಮೇಲೆ ಕೈ ಸಹ ಮಾಡಿದರು. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಡಾವಣೆ ಠಾಣೆ ಇನ್ಸ್ಪೆಕ್ಟರ್ ಕೃಷ್ಣರಾಜು ಹಾಗೂ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು.
ಮಗಳ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ಅಕ್ಷಯ್ ಕಡೆಯವರ ಮೇಲೆ ಹಲ್ಲಿ ಮಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಉದ್ರಿಕ್ತರನ್ನ ಚದುರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಮಗು ಆಗಲಿಲ್ಲ ಎಂಬ ಕಾರಣ ಮುಂದಿಟ್ಟು ಹಣಕ್ಕಾಗಿ ಅಕ್ಷಯ್ ಮತ್ತು ಆತನ ಪೋಷಕರು ತಮ್ಮ ಮಗಳಿಗೆ ಕೊಡಬಾರದ ಕಾಟ ಕೊಟ್ಟಿದ್ದಾರೆ. ನಂತರ ಇವರೇ ಜೀವ ತೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಹೊರಟಿದ್ದಾರೆ. ಇವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ತಪ್ಪಿತಸ್ಥರನ್ನು ಬಂಧಿಸಿ ಶಿಸ್ತು ಕ್ರಮ ಜರುಗಿಸುವ ವರೆಗೂ ಶವ ಎತ್ತುವುದಿಲ್ಲ ಎತ್ತುವುದಿಲ್ಲ ಎಂದು ಪಟ್ಟು ಹಿಡಿದರು. ಮುನ್ನೆಚ್ಚರಿಕೆಯಾಗಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.