ಭುವನೇಶ್ವರ: ಮಾಟ ಮಂತ್ರ ಮಾಡಿದ ಆರೋಪ ಹೊರಿಸಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಒರಿಸ್ಸಾದ ಗುಂಜಾಮ್ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 20 ಮಹಿಳೆಯರು ಸೇರಿದಂತೆ ಒಟ್ಟು 33 ಮಂದಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.
ಕಬೀರಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಜೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳಗಳಲ್ಲಿ ಇಲ್ಲಿನ 10 ಗ್ರಾಮಸ್ಥರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇವರ ಸಾವಿಗೆ ಮಾಟ ಮಂತ್ರವೇ ಕಾರಣವೆಂದು ಗ್ರಾಮಸ್ಥರು ಶಂಕಿಸಿದ್ದರು. ಮಾಟ ಮಂತ್ರದಲ್ಲಿ ಜೂಧಿಷ್ಠಿರ್ ನಹಕ್ ಮತ್ತು ಇತರ ಮೂವರು ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಶಂಕಿಸಿದ್ದು, ಈ ನಿಟ್ಟಿನಲ್ಲಿ ಗ್ರಾಮಸಭೆ ಕರೆದು ಇದಕ್ಕೆ ಸಂಬಂಧಿಸಿದ ವಾದವನ್ನು ಮಂಡಿಸಲಾಯಿತು. ಅಲ್ಲದೆ ಈ ಸಭೆಯಲ್ಲಿ ಶಂಕಿತರಿಗೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.
ಸಂತ್ರಸ್ತರು ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕೋಪಗೊಂಡ ಗ್ರಾಮಸ್ಥರ ಗುಂಪು ಗುಂಪಾಗಿ ನಹಕ್ ಎಂಬವರ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ವಿಷಯ ತಿಳಿದ ತಕ್ಷಣ ಒಬ್ಬ ಉಪವಿಭಾಗದ ಪೊಲೀಸ್ ಅಧಿಕಾರಿ ಮತ್ತು ಮೂವರು ಇನ್ಸ್’ಪೆಕ್ಟರ್ ನೇತೃತ್ವದಲ್ಲಿ ಎರಡು ಪೊಲೀಸ್ ತುಕಡಿಗಳನ್ನು ಗ್ರಾಮಕ್ಕೆ ಕಳುಹಿಸಲಾಗಿತ್ತು. ಈ ವೇಳೆ ನಹಕ್ ಕುಟುಂಬದ ಮೇಲೆ ದಾಳಿ ಮಾಡದಂತೆ ಪೊಲೀಸರು ಗ್ರಾಮಸ್ಥರನ್ನು ಮನವೊಲಿಸಲು ಹರಸಾಹಸ ಪಟ್ಟಿದ್ದರು.
ಈ ಮಧ್ಯೆ ರಾತ್ರಿಯಿಡೀ ಪೊಲೀಸ್ ಕಾವಲು ನಿಂತ ಮುಂಜಾನೆ 3 ಗಂಟೆ ಸುಮಾರಿಗೆ ಜೂಧಿಷ್ಠಿರ್ ನಹಕ್ ಮತ್ತು ಇಬ್ಬರು ಮಕ್ಕಳನ್ನು ಗ್ರಾಮಸ್ಥರಿಂದ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಆದರೆ ನಹಕ್ ಪತ್ನಿ ಜುನು ನಹಕ್ ಅವರು ಮನೆಯಲ್ಲಿ ಒಬ್ಬರೇ ಉಳಿದಿದ್ದರು. ಪರಿಸ್ಥಿತಿಯ ಲಾಭ ಪಡೆದ ಗ್ರಾಮಸ್ಥರು ಆಕೆಗೆ ಅಮಾನುಷವಾಗಿ ಥಳಿಸಿ ಹತ್ಯೆ ನಡೆಸಿದ್ದಾರೆ ಎಂದು ಗಂಜಾಮ್ ಜಿಲ್ಲೆಯ ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಶರವಣ ವಿವೇಕ್ ಎಂ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 20 ಮಹಿಳೆಯರು ಸೇರಿದಂತೆ ಒಟ್ಟು 33 ಮಂದಿ ಗ್ರಾಮಸ್ಥರನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಗ್ರಾಮದಲ್ಲಿ ಮೂರು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿವೆ.
2014ರಿಂದ ಒರಿಸ್ಸಾದಲ್ಲಿ ಮಾಟ ಮಂತ್ರದ ಶಂಕೆಯಲ್ಲಿ ಸುಮಾರು 400 ಜನರನ್ನು ಕೊಲ್ಲಲಾಗಿತ್ತು.