ನವದೆಹಲಿ : ತನ್ನ ಸ್ವಯಂ ಇಚ್ಛೆಯಿಂದ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದರೂ, ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಲಾಗುತ್ತಿದೆ ಮತ್ತು ಉತ್ತರ ಪ್ರದೇಶ ಪೊಲೀಸರು, ಮಾಧ್ಯಮ, ಕೆಲವು ಗುಂಪುಗಳು ಬೆನ್ನು ಬಿದ್ದಿವೆ ಎಂದು ಆಪಾದಿಸಿ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಅವರು ಕೋರಿದ್ದಾರೆ.
ತಾನು ಮತಾಂತರಗೊಂಡಿರುವ ಬಗ್ಗೆ ತನ್ನ ಕುಟುಂಬವನ್ನು ಗುರಿಯಾಗಿಸಲಾಗಿದೆ ಮತ್ತು ದುರುದ್ದೇಶಪೂರಿತ ವರದಿಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು, ಆ ಮೂಲಕ ತನ್ನ ಖಾಸಗಿತನದ ಹಕ್ಕನ್ನೂ ಸಂರಕ್ಷಿಸುವಂತೆ ದೆಹಲಿಯಲ್ಲಿ ಉದ್ಯೋಗದಲ್ಲಿರುವ ಉತ್ತರ ಪ್ರದೇಶದ ಶಾಹಜಹಾನ್ ಪುರ ಮೂಲದ ಮಹಿಳೆ ಕೋರಿದ್ದಾರೆ.
ಅರ್ಜಿದಾರರ ವಯಸ್ಕರಾಗಿದ್ದು, ಆಕೆ ತನ್ನ ನಂಬುಗೆಗಳನ್ನು ಪಾಲಿಸಲು ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿ ಆಕೆಯ ಆಯ್ಕೆಯನ್ನೇ ಗುರಿಯಾಗಿಸಿಕೊಂಡು ಆಕೆಗೆ ಕಿರುಕುಳ ನೀಡಬಾರದು ಎಂದು ಮಹಿಳೆ ಪರ ಅರ್ಜಿಯಲ್ಲಿ ಆಕೆಯ ವಕೀಲರು ವಾದಿಸಿದ್ದಾರೆ.
ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಮಹಿಳೆ ಪರ ವಕೀಲ ಕಮಲೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ರೇಣು ಗಂಗ್ವಾರ್ ಅಲಿಯಾಸ್ ಆಯೆಷಾ ಅಲ್ವಿ ಮೇನಲ್ಲಿ ದೆಹಲಿಯಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಆದರೆ, ಜೂ. 23ರಂದು ಅವರು ಶಾಹಜಹಾನ್ ಪುರಕ್ಕೆ ಬಂದಾಗಿನಿಂದ ಮಾಧ್ಯಮಗಳು ಅವರ ಬೆನ್ನಹಿಂದೆ ಬಿದ್ದಿವೆ. ಭೇಟಿಗೆ ನಿರಾಕರಿಸುತ್ತಿದ್ದರೂ, ಮಾತನಾಡಲು ಸಮಯ ನೀಡುವಂತೆ ಮಾಧ್ಯಮಗಳು ಬೆಂಬಿಡದೇ ಕಾಡುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತನ್ನ ಅನುಮತಿಯಿಲ್ಲದೆ ತಾನಿದ್ದ ಜಾಗಕ್ಕೆ ಬಂದ ಕೆಲವು ವರದಿಗಾರರು ಭಾವಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡಿದ್ದಾರೆ. ಅಂದಿನಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ಮತಾಂತರಗೊಂಡಿರುವ ಸುದ್ದಿ ಪ್ರಕಟಿಸುವುದಾಗಿಯೂ, ಹಣ ನೀಡುವಂತೆಯೂ, ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಲಾಗುತ್ತಿದೆ ಎಂದು ಯುವತಿ ದೂರಿದ್ದಾರೆ.