ಕಟಕ್: ಮೂರು ಅಂತಸ್ಥಿನ ಕಟ್ಟಡ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನು ಮಹಿಳೆಯೋರ್ವರು ರಿಕ್ಷಾ ತಳ್ಳುವ ವ್ಯಕ್ತಿಗೆ ದಾನ ಮಾಡಿದ ಅಪರೂಪದ ಘಟನೆ ಒಡಿಶಾದ ಕಟಕ್’ನಲ್ಲಿ ನಡೆದಿದೆ.
63 ವರ್ಷದ ಮಹಿಳೆ ಮಿನಾಟಿ ಪಟ್ನಾಯಕ್, ಕಟಕ್’ನ ಸುತಾಹತ್ ಕ್ರಶ್ಚಿಯನ್’ಸಹಿ ಪ್ರದೇಶದಲ್ಲಿ ವಾಸವಾಗಿದ್ದು, ಈಕೆಯ ಪತಿ ಉದ್ಯಮಿಯಾಗಿದ್ದ ಕೃಷ್ಣ ಕುಮಾರ್ (70) ಹಾಗೂ ಏಕೈಕ ಮಗಳು ಕೋಮಲ್ ಕುಮಾರಿ (31) ಕಳೆದ ವರ್ಷ ಮೃತಪಟ್ಟಿದ್ದರು. ಮತ್ತೊಂದೆಡೆ ಸ್ಲಮ್’ನಲ್ಲಿ ವಾಸಿಸುತ್ತಾ, ಕಟಕ್’ನ ಬೀದಿಗಳಲ್ಲಿ ರಿಕ್ಷಾ ತಳ್ಳುವುದರ ಮೂಲಕ ಜೀವನ ಸಾಗಿಸುತ್ತಿದ್ದ 53 ವರ್ಷದ ಬುದ್ದ ಸಮಾಲ್, ಕಳೆದ 25 ವರ್ಷಗಳಿಂದ ಮಿನಾಟಿ ಪಟ್ನಾಯಕ್ ಕುಟುಂಬಕ್ಕೆ ಸಹಾಯಿಯಾಗಿ ಕೆಲಸ ಮಾಡುತ್ತಿದ್ದ.
ತನ್ನ ಮೂರಂತಸ್ಥಿನ ಮನೆ, ಒಡವೆ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನು ಮಿನಾಟಿ ಪಟ್ನಾಯಕ್, ರಿಕ್ಷಾವಾಲಾ ಬುದ್ದ ಸಮಾಲ್ ಹೆಸರಿನಲ್ಲಿ ಶನಿವಾರ ವಿಲ್ ಬರೆದಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಿನಾಟಿ ಪಟ್ನಾಯಕ್, “ ಕಳೆದ ವರ್ಷ ನನ್ನ ಪತಿ ಹಾಗೂ ಮಗಳನ್ನು ಕಳೆದುಕೊಂಡಿದ್ದೆ. ಈಗ ನಾನು ನನ್ನ ಸಾವನ್ನು ಎದುರುನೋಡುತ್ತಿದ್ದೇನೆ. ನಾನು ನನ್ನ ಎಲ್ಲಾ ಆಸ್ಥಿಗಳನ್ನು ಬಡವರಿಗೆ ದಾನ ಮಾಡಲು ಇಚ್ಛಿಸಿದ್ದೆ. ಕಳೆದ 25 ವರ್ಷಗಳಿಂದ ಬುದ್ದ ಸಮಾಲ್ ನನಗೆ ಹಾಗೂ ನನ್ನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲೂ ಸಹಾಯ ಮಾಡುತ್ತಿದ್ದಾನೆ. ಆತನಿಗೆ ನಾನು ಆಭಾರಿಯಾಗಿದ್ದೇನೆ. ಬುದ್ದ ಸಮಾಲ್’ನ ಕುಟುಂಬ ಸ್ಲಮ್’ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸ್ವಂತ ಮನೆ ಎಂಬ ಕನಸು ನನಸಾಗಬೇಕಿದೆ.” ಎಂದು ಮಿನಾಟಿ ಹೇಳಿದ್ದಾರೆ.