ಶಿವಮೊಗ್ಗ: ಸಾಕಿದ ಬೆಕ್ಕೊಂದು ಕಚ್ಚಿ ಮಹಿಳೆ ಸಾವಿಗೀಡಾಗಿರುವ ಘಟನೆ ಶಿವಮೊಗ್ಗದ ತರಲಘಟ್ಟ ಕ್ಯಾಂಪ್‌ನಲ್ಲಿ ನಡೆದಿದೆ.
ಬೆಕ್ಕು ಕಚ್ಚಿದ್ದಕ್ಕೆ ಗಂಗೀಬಾಯಿ (50) ಎಂಬವರು ಮೃತಪಟ್ಟಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಬೆಕ್ಕು ಮಹಿಳೆಯ ಕಾಲಿಗೆ ಕಚ್ಚಿತ್ತು. ಬಳಿಕ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಮಹಿಳೆ 1 ಇಂಜೆಕ್ಷನ್‌ಗೆ ಕಾಯಿಲೆ ಗುಣವಾಯಿತು ಎಂದು ಸುಮ್ಮನಾದರು.
ಮೊದಲ ಇಂಜೆಕ್ಷನ್ ಪಡೆದ ಬಳಿಕ ಗಂಗೀಬಾಯಿ ಆರೋಗ್ಯ ಚೇತರಿಸಿಕೊಂಡಿದ್ದು, ಹುಷಾರಾದ ಬಳಿಕ ಗದ್ದೆಗೆ ನಾಟಿ ಮಾಡಲು ಹೋಗಿದ್ದಾರೆ. ನೀರು ಹಾಗೂ ಕೆಸರಿಗೆ ಇಳಿದ ಕಾರಣ ಬೆಕ್ಕು ಕಚ್ಚಿದ ಗಾಯ ಇನ್ನಷ್ಟು ಉಲ್ಬಣಗೊಂಡಿದೆ. ಜೊತೆಗೆ ರೇಬಿಸ್ ಕಾಯಿಲೆಯ ಲಕ್ಷಣಗಳು ಕೂಡ ಹೆಚ್ಚಾಗಿದ್ದು, ತೀವ್ರ ಅನಾರೋಗ್ಯ ಕಾಡಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ನಾಯಿ ಮಾತ್ರವಲ್ಲ ಬೆಕ್ಕು ಕಚ್ಚಿದರೂ ಸಹ ರೇಬಿಸ್ ರೋಗ ಬರುತ್ತದೆ ಎಂದು ತರಲಘಟ್ಟ ಜನರಿಗೆ ತಿಳಿ ಹೇಳಿದ್ದಾರೆ. ಅಲ್ಲದೇ ಒಂದು ವೇಳೆ ಮನೆಯ ಸಾಕು ಪ್ರಾಣಿಗಳು ಕಚ್ಚಿದರೆ ತಕ್ಷಣವೇ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ.