ಕೋಝಿಕ್ಕೋಡ್: ಅಪಹರಿಸಲ್ಪಟ್ಟ ಮಗುವೊಂದಕ್ಕೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಎದೆ ಹಾಲುಣಿಸಿ ಮಾನವೀಯತೆ ಮೆರೆದ ಘಟನೆ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.
12 ದಿನಗಳ ತನ್ನ ಮಗುವನ್ನು ಪತಿ ಅಪಹರಿಸಿದ್ದಾನೆ ಎಂದು ಆರೋಪಿಸಿ 22 ವರ್ಷದ ಯುವತಿಯೊಬ್ಬಳು ಕೋಝಿಕೋಡ್‌ನ ಚೆವಾಯೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಮಗುವನ್ನು ಪತ್ತೆ ಹಚ್ಚಿದ್ದಾರೆ.
ತನಿಖಾ ತಂಡದಲ್ಲಿ ರಮ್ಯಾ ಎಂ ಆರ್ ಎಂಬ ಸಿವಿಲ್ ಪೊಲೀಸ್ ಅಧಿಕಾರಿಯೂ ಇದ್ದರು. ಈ ವೇಳೆ ಅಳುತ್ತಿರುವ ಮಗುವಿಗೆ ಆಹಾರ ಬೇಕಾಗಬಹುದು ಎಂಬುವುದನ್ನು ಮನಗಂಡ ಒಂದು ವರ್ಷದ ಮಗುವಿನ ತಾಯಿಯಾಗಿರುವ ರಮ್ಯಾ ಎಂ ಆರ್ ಎದೆ ಹಾಲುಣಿಸಿದ್ದಾರೆ.
ರಮ್ಯಾ ಅವರ ಮಾತೃ ಮನಸ್ಸಿಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಮತ್ತು ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂಲಾಕ್ಕಡವು ನಿವಾಸಿಗಳಾದ ಆಶಿಖಾ- ಆದಿಲ್ ದಂಪತಿಯ ನಡುವೆ ಉಂಟಾದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಆದಿಲ್ ಇತ್ತೀಚೆಗಷ್ಟೇ ಜನಿಸಿದ್ದ 12 ದಿನಗಳ ಮಗುವನ್ನು ಅಪಹರಿಸಿದ್ದ. ಈ ಬಗ್ಗೆ ಆಶಿಖಾ ಚೆವಾಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಮಗು ಕೂಡ ಪತ್ತೆಯಾಗಿತ್ತು.
ಮಹಿಳಾ ಪೇದೆಯ ಈ ಮಹತ್ಕಾರ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.