ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟದ ಸ್ಮಾರಕದ ಏಳನೇ ಮಹಡಿಯಿಂದ ಕೆಳಗೆ ಹಾರಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾದ ಯುವತಿಯನ್ನು ನಗರದ ರಾಣಿ ಬಗೀಚ್ ಪ್ರದೇಶದ ಸೌಂದರ್ಯ ಕೃಷ್ಣಮೂರ್ತಿ(23) ಎಂದು ಗುರುತಿಸಲಾಗಿದೆ.
ಸೌಂದರ್ಯಳಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಲು ಮನೆಯವರು ಮುಂದಾಗಿದ್ದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸೌಂದರ್ಯ ಪೋಷಕರು ಕಳೆದ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ದಿನೇಶ್ ಜೊತೆಗೆ ಮದುವೆ ನಿಶ್ಚಯ ಮಾಡಿದ್ದರು. ಇದಕ್ಕೆ ಸೌಂದರ್ಯ ಒಪ್ಪಿರಲಿಲ್ಲವಂತೆ. ಇದನ್ನು ಲೆಕ್ಕಿಸದೇ ದಿನೇಶ ಜೊತೆ ಸೌಂದರ್ಯ ನಿಶ್ಚಿತಾರ್ಥ ಸಹ ಮಾಡಿದ್ದರು ಎನ್ನಲಾಗಿದೆ.
ಈ ಮದುವೆಗೆ ಸೌಂದರ್ಯ ಅವರ ಒಪ್ಪಿಗೆ ಇರಲಿಲ್ಲ. ಡಿಸೆಂಬರ್ 21 ರಂದು ಸೌಂದರ್ಯಳ ಭೇಟಿಯಾಗಲು ಭಾವಿ ಪತಿ ದಿನೇಶ ವಿಜಯಪುರಕ್ಕೆ ಬಂದಿದ್ದು ಯುವತಿಯ ಪೋಷಕರು, ನೀವಿಬ್ಬರೂ ಹೊರಗಡೆ ಸುತ್ತಾಡಿಕೊಂಡು ಬನ್ನಿ, ಗೋಲಗುಮ್ಮಟ ನೋಡಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.
ಏಳನೇ ಮಹಡಿಯಲ್ಲಿ ಪ್ರತಿಧ್ವನಿಸುವ ಗ್ಯಾಲರಿಗೆ ಬಂದಾಗ ಸೌಂದರ್ಯ ಒಮ್ಮೆಲೆ ಕೆಳಗಡೆ ಹಾರಿದ್ದಾಳೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸೌಂದರ್ಯ ಮೃತಪಟ್ಟಿದ್ದಳು. ಆಕೆಯ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಗೋಲಗುಮ್ಮಟ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್ ಸೀತಾರಾಮ ಮಠಪತಿ ಹಾಗೂ ಸಿಬ್ಬಂದಿ ಗುರುವಾರ ಘಟನಾ ಸ್ಥಳವಾದ ಗೋಲಗುಮ್ಮಟ ಸ್ಮಾರಕದೊಳಕ್ಕೆ ಆಗಮಿಸಿ ಮಹಜರು ಮಾಡಿದ್ದರು.
ಪ್ರಾಥಮಿಕ ಹಂತದ ತನಿಖೆಯಲ್ಲಿ ಮೃತ ಸೌಂದರ್ಯಳಿಗೆ ಒತ್ತಾಯದಿಂದ ಮದುವೆ ಮಾಡಿಸಲು ಪೋಷಕರು ಮುಂದಾಗಿದ್ದಾರೆ. ಈ ಕಾರಣದಿಂದ ಸೌಂದರ್ಯ ಭಾವಿಪತಿಯ ಎದುರಲ್ಲೇ ಸಾವಿಗೆ ಶರಣಾಗಿದ್ದಾಳೆ ಎಂಬುದು ತಿಳಿದು ಬಂದಿದೆ.
ಘಟನೆ ಕುರಿತು ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಯುವತಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.