ಮೈಸೂರು: ಕಬ್ಬಿಣದ ರಾಡ್ ನಿಂದ ಹೊಡೆದು ಮಹಿಳೆಯ ಹತ್ಯೆ ಮಾಡಿರುವ ಘಟನೆ ನಿನ್ನೆ ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದ್ದು, ಬಳಿಕ ಆರೋಪಿ ಎಸ್ಕೇಪ್ ಆಗಿದ್ದ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಕೊಲೆಯಾದ ರ್ದುದೈವಿ.
ಸಿದ್ದಲಿಂಗಪುರದಲ್ಲಿ ಆರೋಪಿ ಹಾಸನ ಮೂಲದ ಮೋಹನ್ ಹಾಗೂ ಮಮತಾ ಇಬ್ಬರು ಒಟ್ಟಾಗಿ ಬೇಕರಿ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿತ್ತು.
ಇಬ್ಬರ ನಡುವೆ ಏಕಾಏಕಿ ಮಾತಿಗೆ ಮಾತು ಬೆಳೆದು ಮಮತಾಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದನು. ಘಟನಾ ಸ್ಥಳಕ್ಕೆ ಮೇಟಗಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದರು.
ಕೊಲೆಯಾದ ಮಹಿಳೆ ಮಮತಾ ಗಂಡನಿಂದ ದೂರ ಇದ್ದಳು. ಈ ಹಿನ್ನಲೆ ಆಕೆಯ ಜೊತೆ ಸಂಬಂಧ ಬೆಳೆಸಿದ್ದ ಮೋಹನ. ಜೊತೆಗೆ ಇಬ್ಬರು ಸೇರಿ ಸಿದ್ದಲಿಂಗಪುರದಲ್ಲಿ ಬೇಕರಿಯನ್ನ ಶುರು ಮಾಡಿಕೊಂಡು ನಡೆಸುತ್ತಿದ್ದರು.
ಮೇ.24 ರ ಸಂಜೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಕೋಪದಿಂದ ಮೋಹನ್ ಕಬ್ಬಿಣದ ರಾಡ್ನಿಂದ ಬಲವಾಗಿ ತಲೆಗೆ ಹೊಡೆದೆ ಬಿಟ್ಟಿದ್ದಾನೆ. ನೆಲಕ್ಕೆ ಬಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದು, ಆರೋಪಿ ಮೋಹನ್ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ದೂರು ದಾಖಲಿಸಿಕೊಂಡು, ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.