ಚೆನ್ನೈ: ತಮ್ಮ ನಾಲ್ಕು ವರ್ಷದ ಮಗುವಿಗೆ ಸೀಟು ಕೊಡಿಸಲು ಶಾಲೆಗೆ ತೆರಳಿದ್ದ ವೇಳೆ ಪತ್ನಿಯನ್ನು ಹಿಜಾಬ್ ತೆಗೆಯುವಂತೆ ಸೂಚಿಸಿದ ಶಾಲಾ ಪ್ರಾಧಿಕಾರದ ವಿರುದ್ಧ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಚೆನ್ನೈ ಸೆಲೈಯೂರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನ್ನ ಮಗನನ್ನು ಎಲ್.ಕೆ.ಜಿ ತರಗತಿಗೆ ಸೇರಿಸಲು ತಾನು ಮತ್ತು ಪತ್ನಿ ಪೂರ್ವ ತಾಂಬರಂ ಎಂಬಲ್ಲಿರುವ ಖಾಸಗಿ ಶಾಲೆಗೆ ತೆರಳಿದ್ದ ವೇಳೆ ಘಟನೆ ನಡೆದಿರುವುದಾಗಿ ಆಶಿಕ್ ಮೀರಾನ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಾಲೆಯ ಆವರಣದಲ್ಲಿ ಹಿಜಾಬ್ ಧರಿಸಲು ಅನುಮತಿಸುವುದಿಲ್ಲ ಎಂದು ಹೇಳಿ ಹಿಜಾಬ್ ತೆಗೆಯುವಂತೆ ತನ್ನ ಪತ್ನಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ದಂಪತಿ ಪ್ರಾಂಶುಪಾಲರ ಬಳಿಗೆ ತೆರಳಿ ದೂರು ನೀಡಿದ್ದಾರೆ.
ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೆಲೈಯೂರ್ ಪೊಲೀಸ್ ಠಾಣಾಧಿಕಾರಿ, ಹಿಜಾಬ್ ಧರಿಸದಂತೆ ಶಾಲಾ ಸಿಬ್ಬಂದಿ ಸೂಚಿಸಿದ ನಡೆಯನ್ನು ಪ್ರಾಂಶುಪಾಲರು ಬೆಂಬಲಿಸಿದ ಕಾರಣ ದಂಪತಿ ಲಿಖಿತ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹಿಜಾಬ್ ತೆಗೆಯುವಂತೆ ಮಹಿಳೆಗೆ ಸೂಚಿಸಿರುವ ಶಾಲಾ ಆಡಳಿತ ಮಂಡಳಿಯ ನಡೆ ದುರದೃಷ್ಟಕರ ಮತ್ತು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಮಿಳುನಾಡು ಸರ್ಕಾರದ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಘಟನೆಯ ಕುರಿತು ಪೊಲೀಸ್ ತನಿಖೆ ನಡೆಸುತ್ತಿದ್ದು, ವರದಿಯಲ್ಲಿ ಶಾಲಾ ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಮಧುರೈನ ಮತಗಟ್ಟೆಯೊಂದರಲ್ಲಿ ಪೋಲಿಂಗ್ ಏಜೆಂಟ್ ಆಗಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳಾ ಮತದಾರರಿಗೆ ಹಿಜಾಬ್ ತೆಗೆಯುವಂತೆ ಕೇಳಿದ ಬಳಿಕ ಆತನನ್ನು ಬಂಧಿಸಲಾಗಿತ್ತು.