ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ: ಪಕ್ಷ ತೊರೆದವರ ವಿರುದ್ಧ ಡಿಕೆಶಿ ಟೀಕಾಪ್ರಹಾರ

Prasthutha|

ಕಾಂಗ್ರೆಸ್ ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ ಎಂದ ಕೆಪಿಸಿಸಿ ಅಧ್ಯಕ್ಷ

- Advertisement -


ಬೆಂಗಳೂರು: ರಾಜಕೀಯದಲ್ಲಿ ಯಾವುದೂ ಯಾವತ್ತೂ ಶಾಶ್ವತವಲ್ಲ. ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರದಾಹ ಅದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣವೇ ಹೊರತು, ಕಾಂಗ್ರೆಸ್ ಹೊರತಾಗಿ ಅವರು ಬೆಳೆಯಲಿಲ್ಲ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧಿಸಿದ್ದಕ್ಕೆ ಅಲ್ಲವೇ ನಾನು ಮಾಜಿ ಮಂತ್ರಿ, ಶಾಸಕನಾಗಿರುವುದು, ಅಧ್ಯಕ್ಷನಾಗಿರುವುದು. ಈಗ ಪಕ್ಷ ತೊರೆದವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದಕ್ಕೆ ಆ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಾಪ್ರಹಾರ ನಡೆಸಿದರು.


ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಕಾಂಗ್ರೆಸ್ ಕಾರ್ಯಕರ್ತರು ಕುಗ್ಗಿದ್ದಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಿದ್ದಾರೆ. ಇಂತಹ ಮಾತುಗಳು ಸಹಜ. ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇತ್ತು, ನಾವು ಸೋತಿದ್ದೇವೆ. ಬೇರೆ ರಾಜ್ಯಗಳಲ್ಲಿ ಪ್ರಮಾಣ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ಆದಾಗ ಬಿಜೆಪಿ ಕೊಚ್ಚಿ ಹೋಯ್ತು ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೋವಾದಲ್ಲಿ ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್ ನಲ್ಲಿ ಕೇವಲ ಇಬ್ಬರು ಶಾಸಕರು ಮಾತ್ರ ಇದ್ದರು. ಈಗ ಮತ್ತೆ 12 ಶಾಸಕರು ಗೆದ್ದಿದ್ದಾರೆ. ಹಿಂದೆ ಇಂದು ಕಾಲದಲ್ಲಿ ವಾಜಪೇಯಿ ಹಾಗೂ ಆಡ್ವಾಣಿ ಅವರು ಮಾತ್ರ ಸಂಸತ್ತಿನಲ್ಲಿದ್ದರು ಎಂದು ಹೇಳಿದರು.

- Advertisement -


ಚಂದ್ರಬಾಬುನಾಯ್ಡು, ಮಮತಾ ಬ್ಯಾನರ್ಜಿ, ಕೆ.ಸಿ ಚಂದ್ರಶೇಖರ್ ರಾವ್ ಅವರೆಲ್ಲರೂ ಕಾಂಗ್ರೆಸ್ ನಲ್ಲಿದ್ದವರೇ. ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಿರಬಹುದು. ತಪ್ಪುಗಳು ಸಹಜ. ಆದರೆ ಅವು ಉದ್ದೇಶಪೂರ್ವಕ ತಪ್ಪುಗಳಲ್ಲ. ಕೆಲವು ಸಂದರ್ಭದಲ್ಲಿ ನಮ್ಮ ತೀರ್ಮಾನ ತಪ್ಪಾಗುವುದು ಉಂಟು. ಗಾಂಧಿ ಕುಟುಂಬದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಶ್ರಮಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 230ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿದ್ದಾರೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ಪ್ರಧಾನಮಂತ್ರಿ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಕೊಟ್ಟಾಗ ಅವರು ದೇಶಕ್ಕೆ ಉತ್ತಮ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಹೇಳಿ ಆ ಸ್ಥಾನವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಿದ್ದಾರೆ ಎಂದು ಡಿಕೆಶಿ ಹೇಳಿದರು.

ಸೀತಾರಾಮ್ ಕೇಸರಿ ಅವರ ಸಮಯದಲ್ಲಿ ಪಕ್ಷ ಒಡೆದು ಚೂರಾಗುತ್ತಿದ್ದಾಗ ನಾವೆಲ್ಲರೂ ಅವರಿಗೆ ಮನವಿ ಮಾಡಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದೆವು. ಆಗ ಅವರು ಮುಂದೆ ಬಂದು ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕಾಂಗ್ರೆಸ್ 10 ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದೆ. ಅವರು ಪಕ್ಷದ ರಕ್ಷಣೆ ಮಾಡಿದ್ದಾರೆ. ಅವರಿಗೆ ಅಧಿಕಾರ ಮುಖ್ಯವಾಗಿದ್ದರೆ ಅವರು ಪ್ರಧಾನ ಮಂತ್ರಿಯಾಗಬಹುದಿತ್ತು ಎಂದು ಹೇಳಿದರು.


ಬಿಜೆಪಿ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಆದರೆ ಅವರು ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿ ಎಂದು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾವನಾತ್ಮಕ ವಿಚಾರವಾಗಿ ಜನರನ್ನು ಸೆಳೆಯುವುದು ನಮ್ಮ ಉದ್ದೇಶವಲ್ಲ. ಅವರಿಗೆ ಕೇವಲ ಆರ್ಟಿಕಲ್ 370, ಗೋಹತ್ಯೆ, ಮತಾಂತರ ನಿಷೇಧದಂತಹ ವಿಚಾರ ಬಿಟ್ಟು ಅಭಿವೃದ್ಧಿ ಯೋಜನೆಗಳಿವೆಯೇ? ನಾವು ಕೊಟ್ಟ ಶಿಕ್ಷಣ ಹಕ್ಕು, ಆಹಾರ ಭದ್ರತೆ, ಉದ್ಯೋಗ ಭದ್ರತೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರಾ? ಕಳೆದ 7 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ಯಾವುದಾದರೂ ಒಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆಯಾ? ಅವರ ಅಜೆಂಡಾ ಬೇರೆ. ದೇವಾಲಯ, ಜಾತಿ, ಧರ್ಮ ವಿಚಾರವಾಗಿ ಸಮಾಜ ಒಡೆಯುವುದು ಅವರ ಅಜೆಂಡಾ ಎಂದು ಟೀಕಿಸಿದರು.


ದೇಶದಲ್ಲಿ ನಮಗೆ ಈಗ ತಾತ್ಕಾಲಿಕ ಹಿನ್ನಡೆ. ನಮ್ಮ ಇತಿಹಾಸ, ನಮ್ಮ ನಾಯಕತ್ವ, ನಮ್ಮ ಶಕ್ತಿಯಿಂದ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಕಾಂಗ್ರೆಸ್ ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ. ಇಂದು ವಿದೇಶದಲ್ಲಿರುವವರು ಅಭದ್ರತೆ ಎದುರಿಸುತ್ತಿದ್ದಾರೆ. ಈ ದೇಶಕ್ಕೆ ಭವಿಷ್ಯ ಸಿಗಬೇಕಾದರೆ, ನಮ್ಮ ಆರ್ಥಿಕ ನೀತಿ, ಉದಾರಿಕರಣ ನೀತಿ ಎಲ್ಲವೂ ಶಕ್ತಿ ತುಂಬಲಿದೆ. ನೀವೆಲ್ಲ ಕನಸು ಕಾಣಬೇಕು, ಕನಸು ನನಸಾಗಿಸಲು ಹಂಬಲಿಸಬೇಕು, ಕನಸಿಗಾಗಿ ಶಿಸ್ತು ಇಟ್ಟುಕೊಳ್ಳಬೇಕು, ಕನಸಿಗೆ ಬದ್ಧತೆ ತೋರಿಸಬೇಕು. ಕನಸು ಜೀವನಕ್ಕೆ ಸ್ಫೂರ್ತಿ, ನಂಬಿಕೆ ಕನಸಿಗೇ ಸ್ಫೂರ್ತಿ, ಪ್ರೀತಿ ಹೃದಯಕ್ಕೆ ಸ್ಫೂರ್ತಿ, ನಗು ಎಲ್ಲದಕ್ಕೂ ಸ್ಫೂರ್ತಿ. ಹಾಗೇ ನೀವು ಸದಾ ನಗುತ್ತಾ ಜನರ ವಿಶ್ವಾಸ ಗಳಿಸಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Join Whatsapp