ಜೂಲಿ’ಯ ಸಹಾಯದಿಂದ 80 ಗಂಟೆಗಳ ಬಳಿಕ 6 ವರ್ಷದ ಬಾಲಕಿಯನ್ನು ಅವಶೇಷಗಳ ಅಡಿಯಿಂದ ರಕ್ಷಿಸಿದ ಭಾರತೀಯ ತಂಡ

Prasthutha|

ಅಂಕಾರ: ಇಡೀ ರಾತ್ರಿ ಮೈ ಕೊರೆಯುವ ಮಂಜು, ಚಳಿಯಲ್ಲಿ ಅವರು ಕೆಲಸ ಮಾಡಿದರು. ಭೂಕಂಪನದಿಂದ ಮೃತಪಟ್ಟವರನ್ನು ಹೊರ ತೆಗೆಯಲು ಕಾಂಕ್ರೀಟ್ ಹಾಸುಗಳನ್ನು ತೂತು ಮಾಡುತ್ತಿದ್ದರು. ಮರುದಿನ ಬೆಳಿಗ್ಗೆ ಅವರ ನಾಯಿ ಜೂಲಿ ಬೊಗಳಿ ಆ ಮೂರು ಮಹಡಿಯ ಕಟ್ಟಡದ ಅವಶೇಷಗಳ ನಡುವೆ ಚಂಗನೆ ನೆಗೆಯಿತು. ರಕ್ಷಕರು ನಾಯಿಯನ್ನು ಹಿಂಬಾಲಿಸಿದರು. ಮೂರು ಗಂಟೆಗಳ ಪ್ರಯತ್ನದ ಬಳಿಕ ಒಳಗಿನಿಂದ ಅಳುವ ಧ್ವನಿ ಹೊರ ಬಿತ್ತು. “ಓ! ಅಲ್ಲೊಂದು ಮಗು ಜೀವಂತ ಇದೆ.”
ಭಾರತದ ಎನ್ ಡಿಆರ್ ಎಫ್- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಟರ್ಕಿ ಭೂಕಂಪದ ಗಜಿಯನ್ಟೆಪ್ ಪ್ರಾಂತ್ಯದ ನೂರ್ದಗಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ಪವಾಡ ನಡೆಯಿತು.
“ಆ ಆರು ವರ್ಷದ ಬಾಲಕಿಯನ್ನು ಹೊರ ತೆಗೆದು ಸ್ಥಳೀಯ ರಕ್ಷಕರಿಗೆ ನೀಡಲಾಯಿತು. ಅವರು ಆ ಬಾಲಕಿಯನ್ನು ವಾಯು ಮಾರ್ಗವಾಗಿ ಆಸ್ಪತ್ರೆಗೆ ಸಾಗಿಸಿದರು. ಭೂಕಂಪನ ನಡೆದು ಅದಾಗಲೇ 80 ಗಂಟೆ ಕಳೆದಿತ್ತು. ಫೆಬ್ರವರಿ 7ರಂದು ಅಲ್ಲಿಗೆ ಹೋದ ನಾವು ನಿರಂತರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೆವು. ಮೃತದೇಹಗಳ ಹೊರತು ಬೇರೇನೂ ನಮಗೆ ಸಿಕ್ಕಿರಲಿಲ್ಲ. ಆಮೇಲೆ ಈ ಪವಾಡ ಕಂಡೆವು” ಎಂದು ಟರ್ಕಿಗೆ ಹೋದ ಎನ್ ಡಿಆರ್ ಎಫ್ ತಂಡದ ಮುಖ್ಯಸ್ಥ ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ಹೇಳಿದ್ದಾರೆ.
ನಮ್ಮ ಎನ್ ಡಿಆರ್ ಎಫ್ ತಂಡವು ಹತಾಯ್ ಪ್ರಾಂತ್ಯದಲ್ಲಿದ್ದು, ನಾಲ್ಕು ನಾಯಿಗಳೊಡನೆ 151 ಮಂದಿ ಎನ್ ಡಿಆರ್ ಎಫ್ ನವರು ಅಲ್ಲಿಗೆ ಹೋಗಿದ್ದೆವು. ಅವರಲ್ಲಿ 18 ಮಂದಿ ಮತ್ತು ಜೂಲಿಯಿದ್ದ ತಂಡ ಬಾಲಕಿಯನ್ನು ರಕ್ಷಿಸಿದೆ. ಭೂಕಂಪನದ ಮೂಲ ಕೇಂದ್ರದಿಂದ 23 ಕಿಲೋಮೀಟರ್ ದೂರದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿನ ಎಲ್ಲ ಕಟ್ಟಡಗಳು ನೆಲಸಮ ಆಗಿವೆ.
ಇದು ಜೀವ ಕಾಪಾಡುವ ಮತ್ತು ಬೀದಿಗೆ ಬಿದ್ದ ಸ್ಥಳೀಯರನ್ನು ಚಳಿಯಿಂದ ರಕ್ಷಿಸುವ, ಹೆಣವಾದವರನ್ನು ದಪನಕ್ಕೆ ಕಳುಹಿಸುವ ಸವಾಲು. ಅವಶೇಷಗಳ ಬಳಿ ಅವರೆಲ್ಲ ರಕ್ಷಕರು ಯಾರಾದರೂ ಬರುತ್ತಾರೆಂದು ದಿನಗಟ್ಟಲೆ ಕಾದು ಕುಳಿತಿದ್ದರು. ನಾವು ಶವಗಳನ್ನು ಮೇಲೆತ್ತಿದಾಗ ಸಹ ಅವರು ಬಂದು ನಮ್ಮ ಕೈಗೆ ಚುಂಬಿಸುತ್ತಿದ್ದರು ಹಾಗೂ ನಮ್ಮನ್ನು ಹಿಂದುಸ್ತಾನಿ ಎಂದು ಕರೆಯುತ್ತಿದ್ದರು.” ಎಂದು ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ಅಲ್ಲಿನ ಘಟನೆಯನ್ನು ವಿವರಿಸಿದರು. ನಮ್ಮ ತಂಡದ ಕಿರೀಟ ಪ್ರಾಯ ಕೆಲಸವೆಂದರೆ 6 ವರ್ಷದ ಹುಡುಗಿಯ ರಕ್ಷಣೆ ಎಂದೂ ಅವರು ಸ್ಮರಿಸಿದರು.
ನಮ್ಮ ತಂಡವನ್ನು ಬೆಳಿಗ್ಗೆ 9 ಗಂಟೆಗೆ ಎಚ್ಚರಿಸಿದ್ದು, ನಾಯಿಯ ಬೊಗಳುವಿಕೆ. ಕೂಡಲೆ ಸಿಬ್ಬಂದಿ ತಾರಸಿಗಳನ್ನು ತೂತು ಕೊರೆದರು. ಎರಡು ಗಂಟೆಗಳ ಬಳಿಕ ಅವರಿಗೆ 75ರ ಪ್ರಾಯದ ಮಹಿಳೆಯೊಬ್ಬರ ಶವ ದೊರೆಯಿತು. ಆಕೆಯ ಕುಟುಂಬದವರು ಅಲ್ಲಿ ಸುತ್ತ ಬಿದ್ದಿರಬೇಕು ಎಂಬ ಸೂಚನೆ ಸಿಕ್ಕಿತ್ತು. ಮತ್ತೊಂದು ಗಂಟೆಯ ಬಳಿಕ ಎನ್ ಡಿಆರ್ ಎಫ್ ಸಬ್ ಇನ್ಸ್ ಪೆಕ್ಟರ್ ಬಿಂಟಾವು ಬೋರಿಯ ಒಂದು ದಂಪತಿಯ ಶವವನ್ನು ಪತ್ತೆ ಹಚ್ಚಿದರು ಎಂದು ಸಿಂಗ್ ವಿವರಿಸಿದರು.
“ಆ ಮಹಿಳೆಯ ದೇಹವು ಯಾವುದರ ಮೇಲೋ ಬಾಗಿ ಆವರಿಸಿದಂತೆ ಇತ್ತು. ಬೋರಿಯಾ ಅವರು ಹತ್ತಿರ ಹೋದಾಗ ಪ್ರಜ್ಞೆಯಿಲ್ಲದ ಆ ಬಾಲಕಿಯನ್ನು ಮಹಿಳೆಯ ದೇಹದ ಅಡಿಯಲ್ಲಿ ಕಂಡರು. ಸೂಕ್ಷ್ಮವಾಗಿ ಮುಚ್ಚಿದ ಕಣ್ಣುಗಳನ್ನು ಗಮನಿಸಿದ ಬೋರಿಯಾ ಅವರು ಅದರಲ್ಲಿ ಜೀವ ಇರುವುದನ್ನು ಕಂಡು ಕೂಗಿ, ‘ಇಲ್ಲೊಂದು ಮಗು ಜೀವಂತವಿದೆ’’ ಎಂದು ಹೇಳಿದ್ದನ್ನು ಸಿಂಗ್ ವಿವರಿಸಿದರು.
ಮರುದಿನ ಟರ್ಕಿ ಸೇನೆಯವರು ಕಂಡುಕೊಂಡ ಎಂಟು ಮಹಡಿಯ ಅವಶೇಷಗಳ ಅಡಿಯಿಂದ ಎನ್ ಡಿಆರ್ ಎಫ್ ನವರು 13ರ ಬಾಲಕಿಯೊಬ್ಬಳನ್ನು ಜೀವಂತವಾಗಿ ರಕ್ಷಿಸಿದರು. ಈ ಇಬ್ಬರ ಹೊರತಾಗಿ ಎನ್ ಡಿಆರ್ ಎಫ್ ಇಲ್ಲಿ 28 ಶವಗಳನ್ನು ಹೊರ ತೆಗೆಯಿತು. “ಇಲ್ಲಿನ ನಮ್ಮ ಯಶಸ್ವಿ ಕಾರ್ಯಾಚರಣೆಯಲ್ಲಿ ನಾವು ಕರೆತಂದ ನಾಲ್ಕು ನಾಯಿಗಳ ಪಾತ್ರ ಮುಖ್ಯವಾದುದು” ಎಂದು ಸಿಂಗ್ ಹೆಮ್ಮೆಯಿಂದ ಹೇಳಿದರು.
ಇಲ್ಲಿ ಕಾರ್ಯಾಚರಿಸುವ ಎನ್ ಡಿಆರ್ ಎಫ್ ನವರು ತೀವ್ರ ಚಳಿ ಗಾಳಿ, ಮೈನಸ್ 5 ಡಿಗ್ರಿ ಸೆಲ್ಸಿಯಸ್ ನ ಮಂಜು ಬೀಳುವಿಕೆ, ಅಪರಿಚಿತ ನೆಲೆ, ಭಾಷಾ ಸಮಸ್ಯೆ ಇವನ್ನೆಲ್ಲ ಎದುರಿಸಿ ಕೆಲಸ ಮಾಡಿದ್ದಾರೆ.
“ಇದು ವಿಶೇಷ ಬುದ್ಧಿಮತ್ತೆಯೊಡನೆ ಕಾರ್ಯ ನಿರ್ವಹಿಸಬೇಕಾದ ಸ್ಥಳ. ಹೆಚ್ಚು ಬದುಕುಳಿದವರು ಇರುವ ಪ್ರದೇಶದಲ್ಲಿ ಕಾರ್ಯಾಚರಿಸುವ ವಿಶೇಷತೆ. ಮೊದಲ ದಿನ ನಮಗೆ ಬಹಳ ಕಷ್ಟವಾಯಿತು. ಎರಡನೆಯ ದಿನ ನಮಗೆ ಸ್ಥಳೀಯ ನೆಲೆ ತಿಳಿದ ದುಭಾಷಿ ಒಬ್ಬರು ದೊರಕಿದ್ದು ತುಂಬ ಉಪಯೋಗವಾಯಿತು” ಎಂದು ಸಿಂಗ್ ಹೇಳಿದರು.
ಇಲ್ಲಿನ ವ್ಯತಿರಿಕ್ತ ಹವಾಮಾನದಿಂದ ನಮ್ಮ ಒಂದಿಬ್ಬರು ಕಾಯಿಲೆಗೆ ಬಿದ್ದರು. ಆದರೂ ನಾವು ಮೂರು ರಾತ್ರಿ ನಿದ್ರೆಯಿಲ್ಲದೆ ಕೆಲಸ ಮಾಡಿದೆವು. “ಯಾವುದೇ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲ ಮೂರು ದಿನ ತುಂಬ ಕಠಿಣವಾದುದು. ಏಕೆಂದರೆ ಆದಷ್ಟು ಹೆಚ್ಚು ಜನರನ್ನು ಜೀವಂತ ರಕ್ಷಿಸುವ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಾವು ಯಾರೂ ಪ್ರತಿ ಸೆಕೆಂಡನ್ನು ಕೂಡ ದುಡಿಮೆಗೆ ಅರ್ಪಿಸುತ್ತೇವೆ” ಎಂದು ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ಹೇಳಿದರು.

Join Whatsapp